ಗೋಣಿಕೊಪ್ಪ ವರದಿ, ಅ. 9: ಕಾವೇರಿ ದಸರಾ ಸಮಿತಿ ವತಿಯಿಂದ ಆಚರಿಸಲಿರುವ 40 ನೇ ವರ್ಷದ ಗೋಣಿಕೊಪ್ಪ ದಸರಾಕ್ಕೆ ತಾ. 10 ರಂದು (ಇಂದು) ಗೋಣಿಕೊಪ್ಪ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಚಾಲನೆ ದೊರೆಯಲಿದೆ. ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆಯೊಂದಿಗೆ ಧಾರ್ಮಿಕ ವಿಧಿ-ವಿಧಾನದ ಮೂಲಕ ಉದ್ಘಾಟನೆಗೊಳ್ಳಲಿದೆ.
ಇದೇ ಮೊದಲ ಬಾರಿಗೆ ಸರಳವಾಗಿ ಆಚರಣೆ ನಡೆಯಲಿದ್ದು, ವಿಜಯದಶಮಿಯ ಕೊನೆಯ 5 ದಿನಗಳು ಮಾತ್ರ ಸರಳವಾಗಿ ಸಾಂಸ್ಕøತಿಕ ಕಾರ್ಯಕ್ರಮ ನಡೆಸುವ ಚಿಂತನೆ ಹೊರಬಿದ್ದಿದೆ, ತಾ. 10 ರಂದು (ಇಂದು) ಬೆಳಿಗ್ಗೆ 7ಕ್ಕೆ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ನಂತರ ದಶಮಂಟಪ ಸಮಿತಿಗಳ ಪದಾಧಿಕಾರಿಗಳ ಸಮೂಹದಲ್ಲಿ ನಡೆಯುವ ಸಭೆಯಲ್ಲಿ ಮುಂದಿನ ರೂಪುರೋಷೆಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದೆ. ಗೋಣಿಕೊಪ್ಪ ದಸರಾ ಆಚರಿಸುವ ಮಾತೃ ಸಂಸ್ಥೆ ಕಾವೇರಿ ದಸರಾ ಸಮಿತಿ ಸಮಿತಿಯ ಸದಸ್ಯರುಗಳ ಸಲಹೆಯಂತೆ ನಡೆಸಲು ಮುಂದಾಗಿದೆ.
ಪ್ರಾಕೃತಿಕ ವಿಕೋಪದಿಂದಾಗಿ ಸರಳವಾಗಿ ಆಚರಿಸಲು ಮುಂದಾಗಿದೆ. ವಿಜಯದಶಮಿಯ ಕೊನೆಯ 5 ದಿನಗಳಲ್ಲಿ ಮಕ್ಕಳಿಗೆ ಹಲವು ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲು ಕಾವೇರಿ ದಸರಾ ಸಮಿತಿ ಚಿಂತನೆ ನಡೆಸಿದೆ.
ಧಾರ್ಮಿಕವಾಗಿ ದೇವಿ ಪೂಜೆ, ವಿಸರ್ಜನೆ ಸಾಕು ಎಂಬವದು ಕಾವೇರಿ ದಸರಾ ಸಮಿತಿಯ ಮಹಾಸಭೆಯಲ್ಲಿ ಜನರಿಂದ ವ್ಯಕ್ತವಾಗಿತ್ತು. ಆದರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಬರುವ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸುವ ತಾಂತ್ರಿಕ ವ್ಯವಸ್ಥೆಯನ್ನು ಪರಿಗಣಿಸಿ ನಿರ್ಧರಿಸಲಾಗುವದು ಎಂದು ಸಮಿತಿ ಪ್ರಕಟಿಸಿದೆ.
ವಿಜಯದಶಮಿಯಂದು ದೀಪಾಲಂಕಾರ, ಬೃಹತ್ ತೇರುಗಳ ಆಕರ್ಷಣೆ ಈ ಬಾರಿ ಇರುವದಿಲ್ಲ. 5-6 ಜೆಸಿಬಿ, ಟ್ರ್ಯಾಕ್ಟರ್ ಬಳಸಿಕೊಂಡು ಉಪಸಮಿತಿಗಳು ಹೊರತರುತ್ತಿದ್ದ ತೇರುUಳು ಈ ಬಾರಿ ಶೋಭಾಯಾತ್ರೆಯಲ್ಲಿ ಕಾಣಸಿಗುವದು ತೀರಾ ಕಡಿಮೆ ಎನ್ನಬಹುದು. ಇದರಿಂದಾಗಿ ಗೋಣಿಕೊಪ್ಪ ದಸರಾದ ಕೇಂದ್ರ ಬಿಂದುವಾಗಿದ್ದ ಶೋಭಾಯಾತ್ರೆಯ ಆಕರ್ಷಣೆ ಕಳೆದುಕೊಳ್ಳಲಿದೆ. ಒಂದೊಂದು ಟ್ರ್ಯಾಕ್ಟರ್ಗಳಲ್ಲಿ ದೇವರ ಮೂರ್ತಿ ಅನಾವರಣ ಪಡಿಸುವ ಚಿಂತನೆಯನ್ನು ಉಪಸಮಿತಿಗಳು ಹೊಂದಿವೆ.
ವಿಜಯದಶಮಿಯಂದು ಸಾಯಂಕಾಲ ಕಲಾಭಿಮಾನಿಗಳನ್ನು ಆಕರ್ಷಿಸುತ್ತಿದ್ದ ಸ್ತಬ್ದಚಿತ್ರ ಮೆರವಣಿಗೆ ಈ ಬಾರಿ ರದ್ದು ಪಡಿಸಲಾಗಿದೆ. ನಾಡಹಬ್ಬ ದಸರಾ ಸಮಿತಿ ದಸರಾ ಆಚರಣೆಗೆ ವಿಶೇಷ ಅರ್ಥ ಕಲ್ಪಿಸಬೇಕು ಎಂಬ ಚಿಂತನೆಯಲ್ಲಿ ಸ್ತಬ್ದಚಿತ್ರ ಮೆರವಣಿಗೆ ಮೂಲಕ ಚಿತ್ರವಾಗಿ ಅನಾವರಣಗೊಂಡು ಒಂದಷ್ಟು ಸಂದೇಶ ನೀಡುತ್ತಿತ್ತು. ಆದರೆ, ಈ ಬಾರಿ ಇದನ್ನು ರದ್ದುಗೊಳಿಸಲಾಗಿದೆ ಎಂದು ನಾಡಹಬ್ಬ ದಸರಾ ಸಮಿತಿ ಅಧ್ಯಕ್ಷ ಕಾವೇರಮ್ಮ ಪ್ರಕಟಿಸಿದ್ದಾರೆ.
ಬೆಳಗ್ಗೆ ಚಾಮುಂಡೇಶ್ವರಿ ಪ್ರತಿಷ್ಠಾಪನೆ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ನಂತರ ಉಪಸಮಿತಿಗಳು, ಹಿರಿಯರ ಸಲಹೆಯಂತೆ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಗಣಪತಿ, ತಿಳಿಸಿದ್ದಾರೆ.
ವರದಿ - ಸುದ್ದಿಪುತ್ರ