ಮಡಿಕೇರಿ, ಅ. 9 : ಕೊಡಗಿಗೆ ಸಮಸ್ಯೆಗಳು ಎದುರಾದಾಗ ಅದನ್ನು ಒಂದು ರೀತಿಯ ವ್ಯಂಗದ ದಾಟಿಯಲ್ಲಿ ಮರೆಮಾಚಲಾಗುತ್ತಿದೆ ಮತ್ತು ಅದಕ್ಕೆ ಸರಕಾರದಿಂದ ಯಾವದೇ ಸ್ಪಂದನ ದೊರಕುತ್ತಿಲ್ಲ. ಪ್ರಸಕ್ತ ಜಿಲ್ಲೆಯಲ್ಲಿ ನಡೆದಿರುವ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲೂ ಸರಕಾರ ಇದೇ ಧೋರಣೆಯನ್ನು ಅನುಸರಿಸಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಸರಕಾರ ಮನಸ್ಸು ಮಾಡಿದ್ದರೆ ಮಳೆಹಾನಿ ಪ್ರದೇಶ ಹಾಗೂ ಸಂತ್ರಸ್ತರ ಸಮಗ್ರ ಮಾಹಿತಿಯನ್ನು ಆಯಾ ಪಂಚಾಯಿತಿಗಳ ಮೂಲಕ 24 ಗಂಟೆಗಳ ಒಳಗೆ ಸಂಗ್ರಹಿಸಬಹುದಿತ್ತು. ಆದರೆ ವಿಪತ್ತು ನಡೆದು ಎರಡು ತಿಂಗಳಾಗುತ್ತಿದ್ದರೂ, ಇದುವರೆಗೆ ನೈಜ ಸಂತ್ರಸ್ತರನ್ನು ಪತ್ತೆ ಮಾಡುವ ಕಾರ್ಯವನ್ನು ಸರಕಾರ ಮಾಡಿಲ್ಲ. ಇದೀಗ ಪರಿಹಾರ ಕೇಂದ್ರಗಳಲ್ಲಿರುವವರಿಗೆ ಮಾತ್ರ ಸವಲತ್ತು ಎಂಬ ನೀತಿ ಅನುಸರಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಪ್ರಾಕೃತಿಕ ದುರಂತಕ್ಕೆ ಸಿಲುಕಿದ ಸಂತ್ರಸ್ತರನ್ನು ಸರ್ವನಾಶ, ಸಂಪೂರ್ಣ ಹಾನಿ ಹಾಗೂ ಭಾಗಶಃ ಹಾನಿ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ ಅದರ ಆಧಾರದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ನಾಚಪ್ಪ ಆಗ್ರಹಿಸಿದರು. ಸರಕಾರ ಕೊಡಗಿನ ಪ್ರಕೃತಿ ವಿಕೋಪದ ಹೆಸರಿನಲ್ಲಿ ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿ ಅದನ್ನು ತನ್ನ ಇತರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಮುಂದಾಗಿದೆ ಎಂದು ಟೀಕಿಸಿದರು.

ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಬಳಿಕ ದಾನಿಗಳಿಂದ ಹರಿದು ಬಂದ ಆರ್ಥಿಕ ಹಾಗೂ ಸಾಮಗ್ರಿ ನೆರವು ಹಾಗೂ ಸರಕಾರ ಈ ಸಂಬಂಧ ಸಂಗ್ರಹಿಸಿದ ಮತ್ತು ವೆಚ್ಚ ಮಾಡಿದ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ತಾತ್ಕಾಲಿಕ ಮತ್ತು ಶಾಶ್ವತ ಪುನರ್ವಸತಿ ಕುರಿತು ನೀಲಿ ನಕ್ಷೆ ಬಿಡುಗಡೆ ಮಾಡಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಂಯೋಜನೆಗೊಂಡ ವಿಪತ್ತು ನಿರ್ವಹಣಾ ಮಂತ್ರಿಗಳನ್ನು ನೇಮಿಸಬೇಕು. ವಾಯವ್ಯ ಕೊಡಗಿನ ಜಲ-ಸ್ಫೋಟ ಭೂ-ಸ್ಫೋಟ ಉತ್ಪಾತ ಪೀಡಿತ 7 ನಾಡುಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕು. ಮತ್ತು ಈ ಘೋರ ವಿಪತ್ತಿಗೆ ಮೂಲ ಕಾರಣವಾದ ಕೊಡಗಿನ ಹೃದಯದ ಮೇಲೆ ನಿಂತಿರುವ ಹಾರಂಗಿ ಜಲಾಶಯವನ್ನು ತುರ್ತಾಗಿ ಕೆಡವಬೇಕು ಎಂದು ಒತ್ತಾಯಿಸಿ ನಾಚಪ್ಪ ಒತ್ತಾಯಿಸಿದರು.

ಇಂದು ಪ್ರತಿಭಟನೆ : ತಾ. 10ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ 11ರ ಬೆಳಿಗ್ಗೆ 10 ಗಂಟೆಯವರೆಗೆ ಮಡಿಕೇರಿಯ ಗಾಂಧಿ ಮೈದಾನದ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಚೆಂಬಾಂಡ ಜನತ್ ಉಪಸ್ಥಿತರಿದ್ದರು.