ಸುಂಟಿಕೊಪ್ಪ, ಅ. 8: ರಸ್ತೆ ಚರಂಡಿ ಕುಡಿಯುವ ನೀರಿಗೆ ಆದ್ಯತೆ ನೀಡಿ, ನೂತನ ಬಸ್ ನಿಲ್ದಾಣ, ಪದವಿ ಕಾಲೇಜು, ಮಾರುಕಟ್ಟೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಸುಂಟಿಕೊಪ್ಪ ಗ್ರಾಮ ಸಭೆಯಲ್ಲಿ ಹಕ್ಕೋತ್ತಾಯ ಮಂಡಿಸಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ 2018ನೇ ಸಾಲಿನ ಗ್ರಾಮ ಸಭೆಯು ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ನಿವೇಶನ ವಿದ್ದು, ಮನೆಯಿಲ್ಲದವರಿಗೆ ಮನೆ ನಿರ್ಮಿಸಿಕೊಡಲಿದ್ದು, ತೀರಾ ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ಕೆಡವಿ ನೂತನ ಮನೆ ನಿರ್ಮಿಸುವ ಫಲಾನುಭವಿಗಳನ್ನು ಪರಿಗಣಿಸ ಲಾಗುವದು ಎಂದು ಪಿಡಿಓ ಮೇದಪ್ಪ ಹೇಳಿದರು. ಮೊದಲಿಗೆ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಕೆಲವರು ಗೈರಾಗಿದ್ದಾರೆ. ಜಿ.ಪಂ. ಸದಸ್ಯರೇ ಇಲ್ಲ ಏತಕ್ಕಾಗಿ ಗ್ರಾಮಸಭೆ ನಡೆಸುವದು ಎಂದು ಡಿ. ನರಸಿಂಹ ಪ್ರಶ್ನಿಸಿದರು. 13 ಮಂದಿ ಸದಸ್ಯರು ಬಂದಿದ್ದಾರೆ ಸಭೆ ನಡೆಸಬಹುದೆಂದು ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಸಮಜಾಯಿಷಿಕೆ ನೀಡಿದರು.
ಎಲ್ಲಾ ಹೋಬಳಿ ಗ್ರಾಮದಲ್ಲಿ ಪದವಿ ಕಾಲೇಜು, ಬಸ್ ನಿಲ್ದಾಣ ನಿರ್ಮಾಣ ಆಗಿದೆ. ಆದರೆ ಸುಂಟಿಕೊಪ್ಪಕ್ಕೆ ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಯಿಂದ ಆ ಭಾಗ್ಯ ಇನ್ನೂ ಲಭ್ಯವಾಗಿಲ್ಲ. ಇನ್ನಾದರೂ ಪದವಿ ಕಾಲೇಜು, ನೂತನ ಬಸ್ ನಿಲ್ದಾಣ, ಮಾರುಕಟ್ಟೆಗೆ ಜಾಗ ಗುರುತಿಸಿ ಕಾಯೋನ್ಮುಖರಾಗಿ ಎಂದು ಸೂಫಿ ಆಗ್ರಹಿಸಿದರು. ನಮ್ಮ ವಿಭಾಗದಲ್ಲಿ 5 ವರ್ಷದಿಂದ ರಸ್ತೆಗೆ ಬೇಡಿಕೆ ಇಟ್ಟರೂ ಇನ್ನೂ ರಸ್ತೆ ಆಗಲಿಲ್ಲ ಎಂದು ಮುಸ್ತಾಫ ಪಂಚಾಯಿತಿ ಆಡಳಿತದ ವಿರುದ್ಧ ಕಿಡಿಕಾರಿದರು. ಗದ್ದೆಹಳ್ಳ ಗಿರಿಯಪ್ಪನ ವಿಭಾಗದಲ್ಲಿ ಕೆರೆ ನಿರ್ಮಿಸಿದ್ದು, ನೀರು ಸಿಗದಾಗಿದೆ. ಬಾವಿ ಕಾಡುಪಾಲಾಗಿದೆ. ಬರೆ ಕುಸಿದು ರಸ್ತೆ ಇಲ್ಲದಾಗಿದೆ ಎಲ್ಲಾವೂ ಕಳಪೆ ಕಾಮಗಾರಿಯಿಂದ ಜನರಿಗೆ ತೊಂದರೆಯಾಗಿದೆ ಎಂದು ಶ್ರೀರಾಮ್ ಹರಿಹಾಯ್ದರು. ಸಂತೆ ದಿನ ಉಲುಗುಲಿ ರಸ್ತೆಯ 2 ಬದಿಯಲ್ಲಿ ವ್ಯಾಪಾರಸ್ಥರು ಅಂಗಡಿ ಇಡುವದ ರಿಂದ ಪಾದಾಚಾರಿಗಳಿಗೆ ವಾಹನ ಸಂಚಾರಕ್ಕೆ ತೊಡಕಾಗಿದೆ. 1 ಬದಿ ಮಾತ್ರ ಅಂಗಡಿಯಿಡಲು ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಿ ಎಂದು ಬಾಬು ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಒಪ್ಪಿಗೆ ನೀಡಿದರೆ ಉಲುಗುಲಿ ರಸ್ತೆ ಬಲಬದಿ ಯಲ್ಲಿ ಸಂತೆ ದಿನ ಅಂಗಡಿಯಿಡು ವವರನ್ನು ತೆರವುಗೊಳಿಸುತ್ತೇವೆ. ಅವರಿಗೆ ಪರ್ಯಾಯವಾಗಿ ಅಂಗಡಿ ಇಡಲು ಗ್ರಾ.ಪಂ. ಜಾಗ ಒದಗಿಸಿಕೊಡ ಬೇಕಾಗುತ್ತದೆ ಎಂದು ಠಾಣಾಧಿಕಾರಿ ಜಯರಾಂ ಸಭೆಗೆ ತಿಳಿಸಿದರು. ಜಿ.ಪಂ.ನಿಂದ ಜೇನುಕಾಡು ಬಳಿ ನಿರ್ಮಿಸಿದ ರಸ್ತೆ ಹಾಳಾಗಿದೆ. ಕಳಪೆ ಕಾಮಗಾರಿಯಿಂದ ಸರಕಾರದ ರೂ. 1.5 ಲಕ್ಷ ನೀರು ಪಾಲಾಗಿದೆ ಎಂದು ಇಬ್ರಾಹಿಂ ಹೇಳಿದರು.
ಪ್ರಕೃತಿ ವಿಕೋಪದಿಂದ ಕೊಡಗಿನ ಜನತೆ ತತ್ತರಿಸಿ ಹೋಗಿದ್ದಾರೆ. ಸರಕಾರ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಕಿಟ್ ವಿತರಿಸಿ ಕೆಲಸವಿಲ್ಲದ ಕೂಲಿ ಕಾರ್ಮಿಕರ ನೆರವಿಗೆ ಬಂದರೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯವರು ಆಹಾರ ಕಿಟ್ ವಿತರಿಸದೆ ಬಡವರ ಹೊಟ್ಟೆಗೆ ಗದಾಪ್ರಹಾರ ಮಾಡಿದ್ದಾರೆ ಎಂದು ಗ್ರಾಮಸ್ಥ ಜಯನ್ ಹೇಳಿದರು.
ಕಂದಾಯ ಇಲಾಖೆಯ ವಸತಿ ಗೃಹ ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಿ ಅಕ್ರಮ ಚಟುವಟಿಕೆ ನಡೆಯುವ ಬಗ್ಗೆ ವರದಿ ಬಂದಿದೆ. ಈ ಕಟ್ಟಡವನ್ನು ನೆಲಸಮ ಮಾಡಿ ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಿಸುವಂತಾಗಬೇಕು. ಶಾಲೆ-ಕಾಲೇಜುಗಳ 100 ಮೀಟರ್ ಒಳಗೆ ತಂಬಾಕು, ಸಿಗರೇಟು, ಗುಟ್ಕಾ ನಿಷೇಧಿಸಿದರೂ ಅದನ್ನು ಕೆಲ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹೇಳಿದರು.
ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಅತಿವೃಷ್ಠಿಯಿಂದ ಕೊಡಗಿನ ಶ್ರಮಿಕರು, ರೈತರು, ಮಧ್ಯಮ ವರ್ಗದವರು, ಮನೆ-ಮಠ, ಗದ್ದೆ, ಕಾಫಿ ತೋಟ ಕಳೆದುಕೊಂಡಿದ್ದಾರೆ. ಕಂದಾಯ ಇಲಾಖೆ ಚೆಸ್ಕಾಂ ಉತ್ತಮ ಸೇವೆ ಸಲ್ಲಿಸಿ ಜನರಿಗೆ ಸ್ಪಂದಿಸಿದ್ದಾರೆ ಇವರ ಕಾರ್ಯ ಶ್ಲಾಘನೀಯವಾದದು ಎಂದರು. ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ನೋಡೆಲ್ ಅಧಿಕಾರಿ ಪಿ.ಎಸ್. ಬೋಪಯ್ಯ, ಜಿ.ಪಂ. ಇಂಜಿನಿಯರ್ ಫಯಾಜ್ ಅಹ್ಮದ್, ಗ್ರಾಮ ಲೆಕ್ಕಿಗ ಯಶವಂತ್, ಗ್ರಾ.ಪಂ. ಸದಸ್ಯರುಗಳಾದ ಹೇಮಂತ್, ಬಿ.ಎಂ. ಸುರೇಶ್, ಎ. ಶ್ರೀಧರ್ ಕುಮಾರ್, ಶಾಹಿದ್, ಕೆ.ಇ. ಕರೀಂ, ಸಿ. ಚಂದ್ರ, ರಜಾಕ್, ಸೋಮಯ್ಯ, ನಾಗರತ್ನ, ಗಿರಿಜಾ ಉದಯಕುಮಾರ್, ಜ್ಯೋತಿ ಭಾಸ್ಕರ್, ರತ್ನಾ ಜಯನ್, ನಾಗರತ್ನ ಸುರೇಶ್, ಶಿವಮ್ಮ ಮಹೇಶ್, ರಹೆನಾ ಸುಲ್ತಾನ್, ಕಾರ್ಯದರ್ಶಿ ಶ್ರೀಧರ್ ಉಪಸ್ಥಿತರಿದ್ದರು.