ಸಿದ್ದಾಪುರ, ಅ. 9: ಪ್ರಾಚೀನ ಕಾಲದಿಂದಲೂ ಬದುಕನ್ನು ಕಂಡುಕೊಂಡಿದ್ದ ಮಣ್ಣಿನ ಮಡಿಕೆ ತಯಾರಿಸುವ ಕುಂಬಾರರ ಬದುಕು ಇಂದು ದುಸ್ತರವಾಗಿದೆ. ತಮ್ಮ ಜೀವನೋಪಾಯಕ್ಕಾಗಿ ಸ್ವಯಂ ಉದ್ಯೋಗವನ್ನು ಕಂಡುಕೊಂಡಿರುವ ಕುಂಬಾರರು ಮಡಿಕೆ ಕೊಳ್ಳುವವರಿಲ್ಲದೆ ಮಡಿಕೆಯ ಚಕ್ರದಲ್ಲಿ ತಿರುಗುವಂತಾಗಿದೆ.
ಕಳೆದ ಸುಮಾರು ವರ್ಷಗಳಿಂದ ನೆಲ್ಲಿಹುದಿಕೇರಿ-ಕುಂಬಾರಗುಂಡಿ ಎಂಬಲ್ಲಿ ಮಡಿಕೆಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಬಡ ಕುಟುಂಬವೊಂದು ತಮ್ಮ ಜೀವನ ಉಪಯೋಗಕ್ಕಾಗಿ ಹಸಿ ಮಣ್ಣಿನಿಂದ ಮಡಿಕೆಗಳನ್ನು ತಯಾರಿಸಿ ಅದನ್ನು ಬೆಂಕಿಯಿಂದ ಸುಟ್ಟು ಮಾರಾಟ ಮಾಡುತ್ತಿತ್ತು. ಹಿಂದಿನ ಕಾಲದಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ ಮಡಿಕೆಗಳನ್ನು ಕುಕ್ಕೆಯಲ್ಲಿ ತುಂಬಿಸಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಮನೆಮನೆಗೆ ತೆರಳಿ ಮಾರಾಟ ಮಾಡುತ್ತಿದ್ದರು. ಅಲ್ಲದೇ ಸಂತೆ ದಿನಗಳಲ್ಲಿ ಸಂತೆ ನಡೆಯುವ ದೂರದ ಊರುಗಳಿಗೆ ಮಡಿಕೆÀಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕುಟುಂಬದವರೆಲ್ಲರು ಸೇರಿ ಮಣ್ಣುಗಳನ್ನು ರಾಶಿ ಹಾಕಿ ಮುದ್ದೆಯ ರೀತಿಯಲ್ಲಿ ತಯಾರಿಸಿ ಮಡಿಕೆ ತಯಾರಿಸುವ ಚಕ್ರಕ್ಕೆ ಹಾಕಿ ಅದನ್ನು ತಿರುಗಿಸುತ್ತಿದ್ದರು. ಮಡಿಕೆಗಳನ್ನು ಅಲ್ಲದೇ ವಿವಿಧ ರೀತಿಯ ಹೂ ಕುಂಡಗಳನ್ನು ತಯಾರಿಸಲಾಗುತ್ತಿದೆ. ಹಿಂದಿನ ಕಾಲದಲ್ಲಿ ಬಹುತೇಕ ಕುಂಬಾರರು ತಯಾರಿಸಿದ ಮಣ್ಣಿನ ಮಡಿಕೆಗಳನ್ನು ಮಾಂಸ, ಮೀನು ಸಾರುಗಳನ್ನು ತಯಾರಿಸಲು ಬಳಸುತ್ತಿದ್ದರು. ಅಲ್ಲದೇ ಮಣ್ಣಿನ ಮಡಿಕೆಯಲ್ಲಿ ತಯಾರಿಸಿದ ಮಾಂಸಹಾರಿ ಪದಾರ್ಥಗಳು ರುಚಿಕರವಾಗಿರುತ್ತಿತ್ತು ಎಂದು ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಲಗಳು ಬದಲಾಗುತ್ತಿದ್ದಂತೆ ಮಣ್ಣಿನ ಮಡಿಕೆಗಳಿಗೆ ಬೇಡಿಕೆಗಳು ಕಡಿಮೆಯಾಗುತ್ತಿರುವದು ಕುಂಬಾರರಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೇ ಇಂದಿನ ಕಾಲದವರು ಅಡುಗೆ ಅನಿಲ ಬಳಸಿಕೊಂಡು ಕುಕ್ಕರ್ ಇನ್ನಿತರ ಆಧುನಿಕ ಪಾತ್ರೆಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಸಂತೆಗಳಿಗೆ ತರಕಾರಿಗಳನ್ನು ಖರೀದಿಸಲು ತೆರಳುವ ಸಂದರ್ಭದಲ್ಲಿ ಸಾರು ತಯಾರಿಸಲು ಹಾಗೂ ಬಿಸಿ ನೀರು ಕಾಯಿಸಲು ಮಡಿಕೆಗಳನ್ನು ಖರೀದಿಸುತ್ತಿದ್ದರು. ಅಲ್ಲದೇ ತಮ್ಮ ಮನೆಯ ಸುತ್ತಲೂ ಹೂವಿನ ಗಿಡಗಳಿಂದ ಅಲಂಕಾರ ಮಾಡಲು ಮಣ್ಣಿನ ಹೂ ಕುಂಡಗಳನ್ನು ಬಳಸುತ್ತಿದ್ದರು. ಆದರೆ ಇದೀಗ ಮಣ್ಣಿನ ಮಡಿಕೆಗಳು ಹಾಗೂ ಹೂ ಕುಂಡಗಳ ವ್ಯಾಪಾರ ಕುಂಠಿತವಾಗುತ್ತಿದ್ದು, ಕುಂಬಾರ ತಯಾರಿಸಿದ ಮಡಿಕೆಗಳಿಗೆ ಬೇಡಿಕೆ ಇಲ್ಲವಾಗಿದೆ.
ಇದೇ ವೃತ್ತಿಯನ್ನು ಅವಲಂಭಿಸಿಕೊಂಡಿರುವ ಕುಂಬಾರಗುಂಡಿಯ ಕುಟುಂಬಗಳು ಬೇರೆ ವೃತ್ತಿಗೆ ಹೋಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆ ಪ್ರಾಚೀನ ಕಸುಬೊಂದು ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವದು ವಿಷಾದನೀಯವಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಮಣ್ಣಿನ ಮಡಿಕೆ ತಯಾರಿಸುವ ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಇಲ್ಲ: ರಾಜು
ತನಗೆ 15 ವರ್ಷ ಪ್ರಾಯ ಇರುವಾಗಲೇ ತಾನು ಮಣ್ಣಿನ ಮಡಿಕೆ ತಯಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ತನಗೆ ಇದೀಗ 60 ವರ್ಷ ಪ್ರಾಯವಾಗಿದೆ. ಆದರೂ ಕೂಡ ತಾನು ತನ್ನ ವೃತ್ತಿಯನ್ನು ಮುಂದುವರೆಸಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಆದರೆ ಇದೀಗ ಸೌದೆ ಬೆಲೆ ಕೂಡ ಅಧಿಕವಾಗಿದ್ದು, ಮಡಿಕೆÀಗಳನ್ನು ತಯಾರಿಸಿ ಬೆಂಕಿಯಲ್ಲಿಟ್ಟು ಸುಟ್ಟು ಮÁರಾಟ ಮಾಡಲು ತೆರಳಿದರೆ ಮಾರುಕಟ್ಟೆಯಲ್ಲಿ ಸಮರ್ಪಕವಾದ ಬೆಲೆ ಸಿಗುತ್ತಿಲ್ಲ.
ಕಷ್ಟಪಟ್ಟು ಕೆಲಸ ಮಾಡಿ ತಯಾರಿಸಿದ ಮಡಿಕೆಗಳನ್ನು ದೂರದ ಊರುಗಳಿಗೆ ತೆಗೆದುಕೊಂಡು ಹೋದರೂ ಖರೀದಿಸುವವರ ಸಂಖ್ಯೆ ವಿರಳವಾಗಿದೆ ಎಂದು ಮಡಿಕೆ ತಯಾರಕ ರಾಜು ಅಳಲು ತೋಡಿಕೊಂಡರು. ತಾನು ತಯಾರಿಸಿದ ಮಡಿಕೆಗಳು ವ್ಯಾಪಾರವಾಗದ ಹಿನ್ನೆಲೆ ತನ್ನ ಮಕ್ಕಳು ಬೇಸತ್ತು ಬೇರೆ ಕೆಲಸದತ್ತ ಆಸಕ್ತಿ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.