ಚೆಟ್ಟಳ್ಳಿ, ಅ. 9: ವಿಶ್ವ ಪ್ರಸಿದ್ಧ ಮೈಸೂರು ದಸರಾಕ್ಕೆ ಅಂಬಾರಿ ಹೊರಲಿರುವ ಅರ್ಜುನನ ಜೊತೆಗೆ ಬಲರಾಮ, ಗಜೇಂದ್ರ, ಅಭಿಮನ್ಯುವನ್ನು ಅದ್ಧೂರಿ ಸ್ವಾಗತದೊಂದಿಗೆ ಕರೆತಂದರೆ ದುಬಾರೆ ಸಾಕಾನೆ ಶಿಬಿರದಿಂದ ಧನಂಜಯ, ಗೋಪಿ, ವಿಕ್ರಮ, ವಿಜಯ, ಕಾವೇರಿ, ಪ್ರಶಾಂತ್ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದಿಂದ ದ್ರೋಣ ಹಾಗೂ ಗೋಪಾಲಸ್ವಾಮಿ ಆನೆಗಳನ್ನು ಬರಮಾಡಿಕೊಳ್ಳಲಾಗಿದೆ.

ದುಬಾರೆ ಸಾಕಾನೆ ಶಿಬಿರದಲ್ಲಿ ಉತ್ತಮ ಸ್ವಭಾವ ಹಾಗೂ ದೇಹದಾಡ್ಯತೆ ಹೊಂದಿರುವ ಧನಂಜಯನೆಂಬ ಸಾಕಾನೆಗೆ ಮುಂದಿನ 5 ವರ್ಷದಲ್ಲಿ ಅಂಬಾರಿ ಹೊತ್ತು ನಡೆಯುವ ಅವಕಾಶ ದೊರೆಯುವ ಸಾಧ್ಯತೆ ಇದೆ.

2013ರ ನವೆಂಬರ್ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಸುಮಾರು 23 ಕಾಡಾನೆಗಳನ್ನು ಸೆರೆ ಹಿಡಿದ ಸಂದರ್ಭ 2ನೇ ಆನೆಯಾಗಿ 36 ವಯಸ್ಸಿನ ಈ ಧನಂಜಯನನ್ನು ಎಸಳೂರಿನಲ್ಲಿ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ತರಲಾಗಿತ್ತು. 4 ವರ್ಷಗಳು ತರಬೇತಿ ಹೊಂದಿ ಇದೇ ಮೊದಲ ಬಾರಿಗೆ ಇತರ ಆನೆಗಳ ಜೊತೆ ತೆರಳಿ ಮೈಸೂರು ದಸರಾದಲ್ಲಿ ತಾಲೀಮು ನÀಡೆಸಲಾಗುತ್ತಿದೆ. ಧನಂಜಯನ ಹೆಗಲ ಮೇಲೆ ಮರದ ಅಂಬಾರಿಯನ್ನು ಏರಿಸಿ ತಾಲೀಮು ನಡೆಸುತ್ತಿರುವಾಗ ಎಲ್ಲ ಆನೆಗಳಿಗಿಂತ ಉತ್ತಮ ರೀತಿಯಲ್ಲಿ ಒಗ್ಗಿಕೊಳ್ಳುತ್ತಿದೆ. ಈ ವರ್ಷ ಮೊದಲ ತರಬೇತಿಯಾದರಿಂದ ಕುಶಲ ತೋಪಿನ ಶಬ್ಧಕ್ಕೆ ಸ್ವಲ್ಪ ಹೆದರಿತಾದರೂ ಮತ್ತೆ ಒಗ್ಗಿಕೊಂಡಿತು. ಮಾವುತ-ಕಾವಾಡಿಗಳಲ್ಲದೆ ಇತರ ಎಲ್ಲರೊಂದಿಗೂ ಒಗ್ಗಿಕೊಳ್ಳುತ್ತಿರುವ ಧನಂಜಯ ಮೊದಲ ವರ್ಷವೇ ಎಲ್ಲರ ಪ್ರೀತಿಗೆ ಪಾತ್ರನಾಗುತ್ತಿದ್ದಾನೆ.

ಈ ವರ್ಷ ಚಿನ್ನದ ಅಂಬಾರಿ ಹೊರಲಿರುವ 58 ವರ್ಷದ ಅರ್ಜುನನೊಂದಿಗೆ ಹಿರಿಯ ಆನೆಗಳ ಜೊತೆಗೆ ಧನಂಜಯನ ಹೆಜ್ಜೆ ಕಂಡುಬರುತ್ತಿದೆ.

ದಸರಾದ ಅಂಗವಾಗಿ ತರಬೇತಿ ಹೊಂದಿದ ಆನೆಗಳನ್ನು ಹಲವು ಶಿಬಿರದಿಂದ ಬರಮಾಡಿಸಿಕೊಂಡು ದಸರಾದವರೆಗೆ ಆನೆಗಳಿಗೆಲ್ಲ ನಿತ್ಯವೂ ತಾಲೀಮು ನಡೆಯುತ್ತಿದ್ದು, ಎರಡನೇ ಹಂತದ ಆನೆಗಳನ್ನು ಮುಂದಿನ 5 ವರ್ಷಗಳಲ್ಲಿ ಅಂಬಾರಿ ಹೊರಲು ಸಿದ್ಧಗೊಳಿಸಲಾಗುತ್ತಿದೆ. ಈ ವರ್ಷ ಮೊದಲ ಬಾರಿಗೆ ಧನಂಜಯ ಅಂಬಾರಿ ಹೊರಲು ಹೆಚ್ಚಿನ ರೀತಿಯಲ್ಲಿ ಒಗ್ಗಿಕೊಳ್ಳುತ್ತಿದ್ದಾನೆಂದು ವೈದ್ಯಾಧಿಕಾರಿ ಡಾ. ನಾಗರಾಜ್ ಹೇಳಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ