ಕೆದಮುಳ್ಳೂರು, ಅ. 9: ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 7 ಅಂಗನವಾಡಿ ಕೇಂದ್ರಗಳಾದ ಕ್ರಿಶ್ಚಿಯನ್ ಕಾಲೋನಿ, ಅಂಗನವಾಡಿ, ಪಡಿಚಿಕಾಡು, ಗುಂಡಿಗೆರೆ, ಕೊಟ್ಟೋಳಿ, ತೋಮರ, ಪಾಲಂಗಾಲ ಮತ್ತು ಕೆದಮುಳ್ಳ್ಳೂರು ಅಂಗನವಾಡಿಗಳ ಸಹಯೋಗದೊಂದಿಗೆ ಕೆದಮುಳ್ಳೂರು ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ‘ಪೌಷ್ಟಿಕಾಂಶ ಪೋಷಣ್’ ಕಾರ್ಯಕ್ರಮ ಜರುಗಿತು.

ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಪೌಷ್ಟಿಕಾಂಶಯುಕ್ತ ಆಹಾರವನ್ನು ತಯಾರಿಸಿ ಗರ್ಭಿಣಿ ಮಹಿಳೆಯರಿಗೆ ಉಣಬಡಿಸುವದರೊಂದಿಗೆ ಹೂಮುಡಿಸಿ, ಅರಸಿನ-ಕುಂಕುಮ ಹಚ್ಚಿ, ಬಳೆ ತೊಡಿಸಿ, ಮಡಿಲು ತುಂಬಿಸಿ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ ಅವರು ಮಾತನಾಡಿ, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಸರಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಅದನ್ನು ಪಡೆದುಕೊಂಡು ಆರೋಗ್ಯವನ್ನು ಕಾಪಾಡುವದರ ಜೊತೆಗೆ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವಂತಾಗಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆ ಮುತ್ತಮ್ಮ ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು. ಪುತ್ತಮಕ್ಕಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಹಾಜರಿದ್ದರು. ಎಲ್ಲಾ 7 ಅಂಗನವಾಡಿಗಳ ಕಾರ್ಯಕರ್ತೆಯರಾದ ಕೆ.ಎಂ. ಉಷಾ, ಶ್ಯಾಮಲಾ, ತಾರಾಮಣಿ, ರಝೀನ, ಗೋಪಮ್ಮ, ವಸಂತಿ ಮುಂತಾದವರು ಕಾರ್ಯಕ್ರಮ ನಡೆಸಿಕೊಟ್ಟರು. ಕೆ.ಎಂ. ಉಷಾಕುಮಾರಿ ನಿರೂಪಿಸಿದರೆ, ಶ್ಯಾಮಲ ಸ್ವಾಗತಿಸಿ ವಂದಿಸಿದರು.