ಮಡಿಕೇರಿ, ಅ. 7: ಕರ್ನಾಟಕದಲ್ಲಿ 104 ಸ್ಥಾನಗಳ ಗೆಲುವಿನೊಂದಿಗೆ ಜನತೆಯ ತೀರ್ಪಿನಂತೆ, ಅಧಿಕಾರ ನಡೆಸಬೇಕಿರುವ ಬಿಜೆಪಿ ವಿರುದ್ಧ ದಬ್ಬಾಳಿಕೆಯೊಂದಿಗೆ, ಅಪವಿತ್ರ ಮೈತ್ರಿಯಿಂದ ಸಮ್ಮಿಶ್ರ ಸರಕಾರ ನಡೆಸುತ್ತಿದ್ದು, ಜೆಡಿಎಸ್ - ಕಾಂಗ್ರೆಸ್ಸಿನ ದಬ್ಬಾಳಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾದಿಂದ ವ್ಯಾಪಕ ಜನಜಾಗೃತಿ ಮೂಡಿಸಲಾಗುವದು ಎಂದು ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಘೋಷಿಸಿದ್ದಾರೆ. ಪ್ರಾಕೃತಿಕ ವಿಕೋಪ ಸಂಭವಿಸಿರುವ ಜಿಲ್ಲೆಯ ಅತಿವೃಷ್ಟಿ ಪ್ರದೇಶಗಳ ಖುದ್ದು ವೀಕ್ಷಣೆಯೊಂದಿಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದಿಂದ ಎಲ್ಲಾ ಹಂತದಲ್ಲಿ ದಬ್ಬಾಳಿಕೆ ನಡೆಯುತ್ತಿದೆ ಎಂದು ಟೀಕಿಸಿದರು.

ಈಗಾಗಲೇ ಕೊಡಗಿನ ಮೂರು ಸ್ಥಳೀಯ ಸಂಸ್ಥೆಗಳೊಂದಿಗೆ ರಾಜ್ಯದ ಅನೇಕ ಕಡೆ ಹಾಗೂ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಹಿಳೆಯರು ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನಿಸು ವದಾಗಿ ಮಾರ್ನುಡಿದರು.ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಜನಪರ ಯೋಜನೆಗಳನ್ನು, ಮಹಿಳಾ ಮೋರ್ಚಾದಿಂದ ಮನೆ ಮನೆಗೆ ತಲಪಿಸುವ ಮುಖಾಂತರ ಸಂಘಟಿತ ಪ್ರಯತ್ನದೊಂದಿಗೆ ಈಗ ಎದುರಾಗಿರುವ ಚುನಾವಣೆಯಲ್ಲಿ ಗೆಲವು ದಾಖಲಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿಯೊಂದಿಗೆ ರಾಜ್ಯದ ಜನತೆ ವಿಶ್ವಾಸ ಹೊಂದಿರುವದಾಗಿ ಸಮರ್ಥನೆ ನೀಡಿದರು.ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿದ್ದರೂ, ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ದಬ್ಬಾಳಿಕೆಯಿಂದ ಸರಕಾರ ರಚಿಸಿದ್ದು, ಯಾವದೇ ಗುರಿ ಅಥವಾ ಯೋಜನೆಯಿಲ್ಲದೆ ಸರಕಾರ ನಡೆಯುತ್ತಿದೆ ಎಂದು ಅವರು ಬೊಟ್ಟು ಮಾಡಿದರು. ಈ ದಿಸೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೊಡಗು ಸೇರಿದಂತೆ ರಾಜ್ಯದ 24 ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ಭವಿಷ್ಯ ನುಡಿದರು. ರಾಜ್ಯದಲ್ಲಿ ಬಿಜೆಪಿಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲ ಮುಖಂಡರು ಒಗ್ಗೂಡಿ ಕಾರ್ಯನಿರ್ವಹಿಸುತ್ತಿದ್ದು, ನಾಯಕರುಗಳ ನಡುವಿನ ಭಿನ್ನಾಬಿಪ್ರಾಯ ಮಾಧ್ಯಮಗಳ ಸೃಷ್ಟಿಯೆಂದು ಪ್ರಶ್ನೆಯೊಂದಕ್ಕೆ ಭಾರತಿಶೆಟ್ಟಿ ಉತ್ತರಿಸಿದರು.

ಪರಿಹಾರ ಬಿಡುಗಡೆ ಮಾಡಲಿ : ಕೊಡಗಿನಲ್ಲಿ ಅತಿವೃಷ್ಟಿ ಸಂಬಂಧ ಇನ್ನು ಕೂಡ ನಿಖರ ಮಾಹಿತಿ ಕಲೆಹಾಕುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಟೀಕಿಸಿದ ಅವರು, ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಂಡು, ಜಿಲ್ಲೆಯ ಶಾಸಕರು, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ

(ಮೊದಲ ಪುಟದಿಂದ) ಮೂಲಕ ಅಗತ್ಯ ಪರಿಹಾರ ನಿಧಿ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದರು.

ನೆರವು ಅಗತ್ಯ : ಜಿಲ್ಲೆಯಲ್ಲಿ ಮನೆಮಠಗಳೊಂದಿಗೆ ಆಸ್ತಿ - ಪಾಸ್ತಿ ಕಳೆದುಕೊಂಡು ಎಲ್ಲಾ ವರ್ಗದ ಮತ್ತು ಬಡವ ಬಲ್ಲಿದರು ನಿರಾಶ್ರಿತರಾಗಿದ್ದು, ಅಂತಹವರಿಗೆ ಇನ್ನೂ ಕೂಡ ಸರಿಯಾಗಿ ಪರಿಹಾರ ಸಿಕ್ಕಿಲ್ಲವೆಂಬ ದೂರುಗಳಿವೆ ಎಂದ ಭಾರತಿ ಶೆಟ್ಟಿ, ಈ ದಿಸೆಯಲ್ಲಿ ಸಕಾಲದಲ್ಲಿ ನೆರವಿನೊಂದಿಗೆ ಸೂರಿನ ವ್ಯವಸ್ಥೆ ಚುರುಕುಗೊಳಿಸಲು ಸಲಹೆ ನೀಡಿದರು.

ಕೊಡಗಿಗೆ ಹೆಚ್ಚು ಹಾನಿ : ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಇತರೆಡೆಗಿಂತಲೂ ಕೊಡಗಿನಲ್ಲಿ ಭೂಕುಸಿತದೊಂದಿಗೆ ಅಪಾರ ಹಾನಿಯಾಗಿದ್ದು, ಜಿಲ್ಲೆಯ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸುವ ಬಗ್ಗೆ ಪ್ರಶಂಸೆ ಕೇಳಿಬಂದಿದ್ದಾಗಿ ನುಡಿದರು. ಪರಿಹಾರ ಕೇಂದ್ರಗಳ ನಿರಾಶ್ರಿತರಿಗೆ ಸ್ಥಳೀಯ ಆಹಾರದೊಂದಿಗೆ ಮೂಲ ಸೌಲಭ್ಯ ಸಮರ್ಪಕ ಪೂರೈಕೆ ಅಗತ್ಯವೆಂದು ಅವರು ಸ್ಪಷ್ಟಪಡಿಸಿದರು.

ರಾಜ್ಯ ಮಹಿಳಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ, ಉಡುಪಿ ಮಾಜಿ ಮೇಯರ್ ರಜನಿದುಗ್ಗಣ್ಣ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪದಾಧಿಕಾರಿಗಳಾದ ಕಾಂತಿ ಸತೀಶ್, ಯಮುನಾ, ಗೀತಾ, ಪವಿತ್ರ, ಅನಿತಾ ಪೂವಯ್ಯ, ಮೀನಾಜ್, ಸುಮಸುದೀಪ್, ನಳಿನಿ, ಉಷಾ ತೇಜಸ್ವಿ, ಸವಿತಾ ರಾಕೇಶ್, ಲಕ್ಷ್ಮೀ, ತಂಗಮ್ಮ ಮೊದಲಾದವರು ಈ ಸಂದರ್ಭ ಹಾಜರಿದ್ದರು.