ಶನಿವಾರಸಂತೆ, ಅ. 6: ಶನಿವಾರಸಂತೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪಂಡಿತ್ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆಯಡಿಯಲ್ಲಿ ಗ್ರಾಮೀಣ ಯುವ ಜನರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಒದಗಿಸುವ ಕುರಿತು ಕಾರ್ಯಾಗಾರವನ್ನು ಏರ್ಪಡಿಸ ಲಾಗಿತ್ತು. ಶನಿವಾರಸಂತೆ ದುಂಡಳ್ಳಿ, ಹಂಡ್ಲಿ ನಿಡ್ತ ಮತ್ತು ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ನಿರುದ್ಯೋಗಿ ಯುವ ಜನರಿಗಾಗಿ ಉದ್ಯೋಗಾವಕಾಶ ಕಾರ್ಯಾಗಾ ರವನ್ನು ಹಮ್ಮಿಕೊಳ್ಳ ಲಾಯಿತು. ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವ ಜನರಿಗಾಗಿ ಉದ್ಯೋಗಾವಕಾಶ ಒದಗಿಸಿಕೊಡುವ ಉದ್ದೇಶದಿಂದ ಗ್ರಾಮೀಣ ಯುವ ಜನರಿಗೆ ಕೌಶಲ್ಯ ತರಬೇತಿ ನೀಡುವ ಜೊತೆಯಲ್ಲಿ ಹಲವಾರು ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುತ್ತಿದೆ ಎಂದರು. ನಿರುದ್ಯೋಗಿ ವಿದ್ಯಾವಂತ ಯುವಕ-ಯುವತಿಯರು ಕೌಶಲ್ಯ ತರಬೇತಿಯನ್ನು ಪಡೆದು ಉದ್ಯೋಗವನ್ನು ಗಿಟ್ಟಿಸಿಕೊಂಡು ಈ ಮೂಲಕವಾಗಿ ನಿರುದ್ಯೋಗ ಸಮಸ್ಯೆಯನ್ನು ನೀಗಿಸುವಂತೆ ಸಲಹೆ ನೀಡಿದರು.

ಮೈಸೂರು ಕೌಶಲ್ಯ ಕಾರ್ಯಾಗಾರ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಅರುಣ್ ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ದೇಶದ ಕುರಿತು ಮಾಹಿತಿ ನೀಡಿ ಸರಕಾರ ಗ್ರಾಮೀಣ ಯುವ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ಸದುದ್ದೇಶದಿಂದ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ ಈ ಮೂಲಕ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು. ಗ್ರಾಮೀಣ ಪ್ರದೇಶ ನಿವಾಸಿಗಳಾದ 18 ರಿಂದ 35 ವರ್ಷ ಒಳಗಿನ ಯುವ ಜನರಿಗೆ ಉದ್ಯೋಗಾವಕಾಶಗಳಿದ್ದು 10ನೇ ತರಗತಿ, ಪಿಯುಸಿಯಿಂದ ಯಾವದೇ ಪದವಿ, ಇಂಜಿನಿಯರಿಂಗ್, ಡಿಪ್ಲೊಮೋ, ಐಟಿಐ ಕೋರ್ಸ್ ಸೇರಿದಂತೆ ಅಭ್ಯರ್ಥಿಯ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವನ್ನು ಒದಗಿಸಿ ಕೊಡಲಾಗುತ್ತಿದೆ. ಪರಿಶಿಷ್ಟ ಜಾತಿ, ಪಂಗಡ, ಸಾಮಾನ್ಯ, ಅಲ್ಪಸಂಖ್ಯಾತ ವರ್ಗದ ನಿರುದ್ಯೋಗಿ ಅಭ್ಯರ್ಥಿಗಳು ಕೌಶಲ್ಯ ತರಬೇತಿ ಪಡೆದ ನಂತರ ಬ್ಯಾಂಕಿಂಗ್, ವ್ಯಾಪಾರ, ಕೈಗಾರಿಕೆ ತರಬೇತಿಯನ್ನು ನೀಡುತ್ತಿದೆ. ಈ ಮೂಲಕ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.

ಅಭ್ಯರ್ಥಿಗಳು ಕೌಶಲ್ಯ ತರಬೇತಿ ಪಡೆದ ನಂತರ ಬ್ಯಾಂಕಿಂಗ್, ವ್ಯಾಪಾರ, ಕೈಗಾರಿಕೆ, ಹೊಟೇಲ್, ಉದ್ಯಮ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವನ್ನು ನೀಡಲಾಗುತ್ತದೆ. ನಿರುದ್ಯೋಗಿ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ 3 ತಿಂಗಳ ವರೆಗೆ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಅವಧಿವರೆಗೆ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ನೀಡಲಾಗುತ್ತದೆ. ಇದರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ವಸತಿ ನಿಲಯಗಳಲ್ಲಿ ವಿಶೇಷ ಭದ್ರತೆಯ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಯುವ ಜನರು ಕೌಶಲ್ಯ ತರಬೇತಿಯನ್ನು ಪಡೆಯುವ ಉದ್ದೇಶದಿಂದ ಗ್ರಾ.ಪಂ. ಮಟ್ಟದಲ್ಲಿ ಉದ್ಯೋಗಾಕಾಂಕ್ಷಿಗಳಿಗಾಗಿ ನೋಂದಾವಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗುತ್ತಿದೆ ಎಂದರು.

ಉದ್ಯೋಗಾವಕಾಶ ನೋಂದಾವಣಿ ಕಾರ್ಯಕ್ರಮದಲ್ಲಿ ಸುಮಾರು 125ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಕೌಶಲ್ಯ ತರಬೇತಿಗಾಗಿ ಹೆಸರು ನೋಂದಾವಣಿ ಮಾಡಿಸಿ ಕೊಂಡರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರಾಧ ಸೌಭಾಗ್ಯಲಕ್ಷ್ಮಿ, ಹೆಚ್.ಆರ್. ಹರೀಶ್, ಗ್ರಾ.ಪಂ. ಪಿಡಿಓ ಧನಂಜಯ್, ಆಲೂರು-ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ, ವೀನಾ ರಮೇಶ್ ವಿವಿಧ ಗ್ರಾ.ಪಂ.ಯ ಪಿಡಿಓಗಳಾದ ಸುಮೇಶ್, ಪೂರ್ಣಿಮಾ, ಸ್ಮಿತಾ, ಕಾರ್ಯದರ್ಶಿ ಗಳಾದ ಚಂದ್ರೇಗೌಡ, ತಮ್ಮಯ್ಯ ಆಚಾರ್, ಲೆಕ್ಕಾಧಿಕಾರಿ ಶರಣಪ್ಪ ಸನದಿ ಮುಂತಾದವರು ಹಾಜರಿದ್ದರು.