ಶನಿವಾರಸಂತೆ, ಅ. 6: ಶನಿವಾರಸಂತೆ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಸಭೆಯ ಪ್ರಮುಖ ಉದ್ದೇಶವಾದ ವಸತಿ ರಹಿತ, ವಿಚೇತ ನರಹಿತ ಫಲಾನುಭವಿಗಳ ಆಯ್ಕೆ ಕುರಿತು ಚರ್ಚೆ ನಡೆಸಲು ಕರೆಯಲಾದ ಸಭೆಗೆ ಬೆರಳೆಣಿಕೆಯಷ್ಟು ಫಲಾನುಭವಿಗಳು ಬಂದಿರುವದನ್ನು ನೋಡಿ ಪಂಚಾಯಿತಿ ಅಧ್ಯಕ್ಷರು ವಿಷಾದ ವ್ಯಕ್ತಪಡಿಸಿದರು.
ಫಲಾನುಭವಿಗಳ ಆಯ್ಕೆ ಕುರಿತು ಚರ್ಚೆ ನಡೆದು ಸುಮಾರು 248 ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಆಯ್ಕೆ ಪಟ್ಟಿಯನ್ನು ಅಭ್ಯರ್ಥಿಗಳ ಹೆಸರು, ಗ್ರಾಮ ಸರಿಯಾಗಿ ಮಾಡಿಸದ ಪಂಚಾಯಿತಿ ಲೆಕ್ಕಾಧಿಕಾರಿ ಶರಣಪ್ಪ ಅವರನ್ನು ಸದಸ್ಯ ಸರ್ದಾರ್ ಅಹಮ್ಮದ್ ಸಭೆಯ ಮಧ್ಯೆ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷರ ಅನುಮತಿಯ ಮೇರೆ ಊರಿನ ಶ್ರೀ ರಾಮಮಂದಿರ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಅರವಿಂದ ರವಿ, ಬಿ.ಕೆ. ಚಂದ್ರು, ದಿವಾಕರ್, ರಂಗಸ್ವಾಮಿ, ಮಹಮ್ಮದ್ ಪಾಶಾ ಇತರರು ಮಾತನಾಡಿ, ಶನಿವಾರಸಂತೆ ಊರು ಅಭಿವೃದ್ಧಿ ಹೊಂದುತ್ತಿಲ್ಲ. ಈ ಬಗ್ಗೆ ಆಡಳಿತ ಮಂಡಳಿಯವರ ಅಷ್ಟಮಂಗಲದಲ್ಲಿ ಪ್ರಶ್ನೆ ಕೇಳಲಾಗಿ, ಊರಿನ ಗ್ರಾಮ ದೇವತೆಯಾದ ಬೀರೆಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡುವಂತೆ ತಿಳಿದು ಬಂದಿದೆ. ಆದುದರಿಂದ ಪಂಚಾಯಿತಿಯ ಸಹಕಾರ ಬೇಕು ಎಂದರು. ಪಂಚಾಯಿತಿ ಅಧ್ಯಕ್ಷರು, ಆಡಳಿತ ಮಂಡಳಿಯವರು ಹಾಗೂ ಅಭಿವೃದ್ಧಿ ಅಧಿಕಾರಿಯವರು ಮಾತನಾಡಿ, ಕಾನೂನು ವ್ಯಾಪ್ತಿಯಲ್ಲಿ ನಾವುಗಳು ದೇವಸ್ಥಾನ, ಮಸೀದಿ ಮಂದಿರಗಳಿಗೆ ಪಂಚಾಯಿತಿ ವತಿಯಿಂದ ಸಹಾಯಧನ ಕೊಡುವ ಹಾಗಿಲ್ಲ ಎಂದಾಗ, ಸದಸ್ಯ ಸರ್ದಾರ್ ಅಹಮ್ಮದ್ ಮಾತನಾಡಿ, ಪಂಚಾಯಿತಿ ನಿಧಿಯಿಂದ ಊರಿಗೆ ಅನುಕೂಲವಾಗುವ ರೀತಿಯಲ್ಲಿ ದೇವಸ್ಥಾನದ ಬಳಿ ಉದ್ಯಾನವನ ನಿರ್ಮಿಸುವ ಕೆಲಸಗಳಿಂದ ಅಭಿವೃದ್ಧಿ ಮಾಡಬಹುದು ಎಂದರು.
ಈ ಹಿಂದೆ ಅಂದರೆ, 4 ತಿಂಗಳ ಹಿಂದೆ ಊರಿನ ಹಾಕಿ ಕ್ರೀಡಾಪಟು ಒಬ್ಬರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ತರಬೇತಿ ಸಮಯದಲ್ಲಿ ಕಾಲು ಮುರಿದುಕೊಂಡು ಹಾಸಿಗೆ ಯಲ್ಲಿ ಜೀವನ ಕಳೆಯುತ್ತಿರುವರು. ಅವರಿಗೆ ಪಂಚಾಯಿತಿ ನಿಧಿಯಿಂದ ರೂ. 30 ಸಾವಿರ ಕೊಡಬೇಕೆಂದು ಸಾಮಾನ್ಯ ಸಭೆಯಲ್ಲಿ ಒಮ್ಮತದಿಂದ ಸರ್ವಸದಸ್ಯರ ಒಪ್ಪಿಗೆ ಪಡೆದು ತೀರ್ಮಾನಿಸಲಾಗಿತ್ತು. ಆದರೆ ಇವತ್ತಿನವರೆಗೂ ಕ್ರೀಡಾಪಟುವಿಗೆ ಹಣ ತಲುಪಿಸುವ ಕೆಲಸ ಅಭಿವೃದ್ಧಿ ಅಧಿಕಾರಿ ಮಾಡಿಲ್ಲ. ಇವರಿಗೆಲ್ಲಾ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ನಂತರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಊರಿನ ಗ್ರಾಮದೇವತೆಯಾದ ಬೀರೆಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಜಿಲ್ಲಾ ಕಾರ್ಯ ನಿರ್ವಾಹಣಾಧಿ ಕಾರಿಗಳೊಂದಿಗೆ ಮಾತನಾಡಿ, ಪಂಚಾಯಿತಿ ನಿಧಿಯಿಂದ ರೂ. 50 ಸಾವಿರ ನೀಡುವ ಬಗ್ಗೆ ಭರವಸೆ ನೀಡಿರುತ್ತಾರೆ.
ವಿಶೇಷ ಗ್ರಾಮ ಸಭೆಯಲ್ಲಿ ತಾ.ಪಂ. ಸದಸ್ಯ ಬಿ.ಎಸ್. ಅನಂತ್ ಕುಮಾರ್, ನೋಡಲ್ ಅಧಿಕಾರಿ ಪಿ.ಆರ್. ಶಶಿಧರ್ ಮಾತನಾಡಿದರು. ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಸೌಭಾಗ್ಯ, ಉಷಾ, ಹೇಮಾವತಿ, ರಜನಿ, ಸರ್ದಾರ್ ಅಹಮ್ಮದ್, ಆದಿತ್ಯಗೌಡ, ಪಾಂಡು, ಹರೀಶ್, ಅಭಿವೃದ್ಧಿ ಅಧಿಕಾರಿ ಧನಂಜಯ್, ಕಾರ್ಯದರ್ಶಿ ತಮ್ಮಯ್ಯಚಾರ್, ಕಂಪ್ಯೂಟರ್ ನಿರ್ವಾಹಕಿ ಪೌಜಿಯಾ, ಬಿಲ್ಕಲೆಕ್ಟರ್ ವಸಂತ, ಸಿಬ್ಬಂದಿಗಳು ಉಪಸ್ಥಿತರಿದ್ದರು.