ಕೂಡಿಗೆ, ಅ. 6: ಮುಳ್ಳುಸೋಗೆ ಗ್ರಾ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ವಸತಿ ಮತ್ತು ನಿವೇಶನ ರಹಿತರ ಅರ್ಜಿಗಳನ್ನು ಜಿಪಿಎಸ್ ಮಾಡುವದರ ಬಗ್ಗೆ ಹಾಗೂ ಅವರುಗಳ ದಾಖಲಾತಿಗಳನ್ನು ಪರಿಶೀಲಿಸಿ ನಿಯಮಾನುಸಾರ ನೀಡುವದರ ಜೊತೆಗೆ ಪೈಸಾರಿ ಜಾಗದಲ್ಲಿರುವವರಿಗೂ ನಿವೇಶನ ನೀಡಬೇಕು ಎಂದು ಸಭೆಯಲ್ಲಿದ್ದ ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡರು.
ನಂತರ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಆಟೋ ಖರೀದಿ ಬಗ್ಗೆ ಚರ್ಚೆಗಳು ನಡೆದವು. ಗುಮ್ಮನಕೊಲ್ಲಿ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಗಳಿಗೆ ಆಹಾರ ಕಿಟ್ ಬಂದಿರುವ ಬಗ್ಗೆ ಚರ್ಚೆ ನಡೆದವು. ಗೊಂದಿಬಸವನಹಳ್ಳಿ ನ್ಯಾಯ ಬೆಲೆ ಅಂಗಡಿಗೆ ಪಡಿತರ ವಸ್ತುಗಳ ವಿತರಣೆಯಲ್ಲಿ ತಾರತಮ್ಯವೆಸಗಿದ್ದಾರೆ ಎಂದು ಆ ಭಾಗದ ಸದಸ್ಯರುಗಳು ಸಭೆಯಲ್ಲಿ ಆರೋಪಿಸಿದರು.
ಸಭೆಯಲ್ಲಿ ಕಾಮಗಾರಿಗಳ ಕ್ರಿಯಾಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ವಿದ್ಯುತ್ ಎನ್.ಓ.ಸಿ. ನೀಡುವ ಬಗ್ಗೆ ಚರ್ಚೆ ನಡೆಸಿದ ಸದಸ್ಯರು, ದಾಖಲಾತಿ ಇರುವವರಿಗೆ ಮಾತ್ರ ನೀಡಬೇಕು ಎಂದು ಸಭೆಗೆ ತಿಳಿಸಿದರು.
ಈ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ್ ನಡೆಯಬೇಕಾದ ಕಾಮಗಾರಿಗಳ ಕ್ರಿಯಾಯೋಜನೆಗಳ ಬಗ್ಗೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.