ಶನಿವಾರಸಂತೆ, ಅ. 6: ಶನಿವಾರಸಂತೆ ಪಟ್ಟಣಕ್ಕೆ ಸೇರಿದ ಮಕ್ಕಳ ಕಟ್ಟೆಕೆರೆಯೊಂದಿದೆ. ಈ ಕೆರೆ ಈಗ ಪೂರ್ಣ ಅಸ್ತಿತ್ವ ಕಳೆದುಕೊಂಡಿದ್ದು, ಗಿಡಗಂಟಿ, ಕಸದ ಎಲೆಗಳು ಬೆಳೆದು ತ್ಯಾಜ್ಯ ಸುರಿಯುವ ತಾಣವಾಗಿದೆ. ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯವೇ ಈ ಕೆರೆಯ ದುಸ್ಥಿತಿಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಗಂಗಪ್ಪ ಕರ್ಕೆ ಅವರ ಅವಧಿಯಲ್ಲಿ ಈ ಕೆರೆಯ ಹೂಳು ತೆಗೆಸಿ ಶುಚಿಗೊಳಿಸಲಾಗಿತ್ತು. ಹಿಂದೊಮ್ಮೆ ಗ್ರಾಮ ಪಂಚಾಯಿತಿ ವತಿಯಿಂದ ಈ ಕೆರೆಯ ಏರಿಯನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸುವ ಚಿಂತನೆ ಇತ್ತಾದರೂ, ಅದು ಕೈಗೂಡಿರಲಿಲ್ಲ. ಇದೀಗ ಈ ಕೆರೆಯೂ ಸಂಪೂರ್ಣವಾಗಿ ಅಳಿವಿನಂಚಿನಲ್ಲಿದ್ದು, ಪಂಚಾಯಿತಿ ಆಡಳಿತ ಮಂಡಳಿ ಕೂಡಲೇ ಎಚ್ಚೆತ್ತುಕೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. - ನರೇಶ್