ಮಡಿಕೇರಿ, ಅ.7: ಅವರೆಲ್ಲಾ ಹಲವು ದಿನಗಳ ಹೋರಾಟ ಕೈ ಬಿಟ್ಟು ಸರ್ಕಾರದ ಭರವಸೆಗಳನ್ನು ನಂಬಿ, ತಾವು ಬದುಕು ಕಟ್ಟಿಕೊಂಡಿದ್ದ ಊರು ತೊರೆದು ಬಂದಿದ್ರು; ಆಸ್ತಿ ಮನೆ ನೀಡುತ್ತೇವೆಂದು ಹೇಳಿದ್ದ ಸರ್ಕಾರ ಮಾತ್ರ ಒಂದೂವರೆ ವರ್ಷವಾದ್ರೂ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಹಾಗಾದ್ರೆ ಸರ್ಕಾರದ ಭರವಸೆ ನಂಬಿ ಬಂದವರ ಸ್ಥಿತಿ ಏನಾಗಿದೆ ಈ ‘ಸ್ಟೋರಿ’ ನೋಡಿ.

ದಿಡ್ಡಳ್ಳಿ ಆದಿವಾಸಿಗಳ ಹೋರಾಟ ನಿಮಗೆಲ್ಲ ನೆನಪಿದೆ ಅನ್ನಿಸುತ್ತೆ.. ಏಕಾಏಕಿ ಆದಿವಾಸಿಗಳನ್ನು ಜಿಲ್ಲಾಡಳಿತ ಒಕ್ಕಲೆಬ್ಬಿಸಿದಾಗ ಭಿನ್ನ ವಿಭಿನ್ನ ಪ್ರತಿಭಟನೆ ಮೂಲಕ ಜಿಲ್ಲಾಡಳಿತವನ್ನೇ ನಡುಗಿಸಿಬಿಟ್ಟಿದ್ದರು. ಈ ಹೋರಾಟ ಭಾರೀ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಮಣಿದ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ, ಒಕ್ಕಲೆಬ್ಬಿಸಿದ್ದ 578 ಕುಟುಂಬಗಳಿಗೂ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿತ್ತು. ಆಗ ಪ್ರತಿಭಟನೆ ವಾಪಸ್ ಪಡೆದಿದ್ದ ಆದಿವಾಸಿಗಳು ಈಗ ಮತ್ತೊಮ್ಮೆ ಹೋರಾಟಕ್ಕಿಳಿಯುವ ಮುನ್ಸೂಚನೆ ಕಂಡು ಬರುತ್ತಿದೆ. ಯಾಕಂದ್ರೆ ಜಿಲ್ಲಾಡಳಿತ ಹೇಳಿದ್ದಕ್ಕಿಂತ ಚಿಕ್ಕ ಮನೆಗಳನ್ನ ನಿರ್ಮಾಣ ಮಾಡಿಕೊಡಲು ಮುಂದಾಗಿದ್ದೇ ಇವರ ಆಕ್ರೋಶಕ್ಕೆ ಕಾರಣ.

ಒಕ್ಕಲೆಬ್ಬಿಸಿದ್ದ ದಿಡ್ಡಳ್ಳಿ ಆದಿವಾಸಿಗಳಿಗೆ ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ ವ್ಯಾಪ್ತಿಯಲ್ಲಿ ನಿವೇಶನ ನಿರ್ಮಿಸಲಾಗುತ್ತಿದೆ. ಒಟ್ಟಿನಲ್ಲಿ, ಜಿಲ್ಲಾಡಳಿತ ತನ್ನ ಮಾತನ್ನೇ ತಾನು ಪಾಲಿಸುತ್ತಿಲ್ಲ ಅನ್ನೋದು ಆದಿವಾಸಿಗಳ ಆರೋಪ. ಜಿಲ್ಲಾಡಳಿತದ ಈ ನಡೆ ಮತ್ತೊಂದು ಹೋರಾಟಕ್ಕೆ ನಾಂದಿ ಹಾಡಿದ್ರೂ ಅಚ್ಚರಿಯಿಲ್ಲ.

ಪ್ಲಾಸ್ಟಿಕ್ ಹೊದಿಸಿದ ಶೆಡ್, ವಿದ್ಯುತ್ ಇರಲಿ ಸೀಮೆಎಣ್ಣೆಯ ಚಿಮಿಣಿಯೂ ಇಲ್ಲದೆ ಸಂಪೂರ್ಣ ಕತ್ತಲು ಆವರಿಸಿರುವ ಗೂಡಿನಂತಹ ಮನೆ, ಗಾಳಿಯೂ ತೂರಲು ಜಾಗವಿಲ್ಲದಂತಹ ಸ್ಥಿತಿಯ ಶೆಡ್‍ಗಳೆ ಇವರ ಬದುಕಿಗಿರುವ ನೆರಳು. ಹೌದು ಇದೆಲ್ಲಾ ಕಂಡು ಬಂದಿದ್ದು ಕಳೆದ ಒಂದೂವರೆ ವರ್ಷದ ಹಿಂದೆ ದಿಡ್ಡಳ್ಳಿಯಿಂದ ಒಕ್ಕಲೆಬ್ಬಿಸಿ ಕುಶಾಲನಗರ ಸಮೀಪದ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಗೆ ನೂಕಿರುವ 578 ಆದಿವಾಸಿ ಕುಟುಂಬಗಳ ಸದ್ಯದ ಬದುಕಿನ ಸ್ಥಿತಿ ಇದು. ಕನಿಷ್ಟ ಮೂಲಭೂತ ಸೌಲಭ್ಯವಿಲ್ಲದೆ ಬದುಕುತ್ತಿರುವ ಕುಟುಂಬಗಳ ದಯನೀಯ ಸ್ಥಿತಿ. ಒಂದೂವರೆ ವರ್ಷದಿಂದ ಸೋಲಾರ್ ದೀಪ ಒದಗಿಸುವಂತೆ ಜನರು ಒತ್ತಾಯಿಸಿದ್ದರೂ ಇದುವರೆಗೆ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಜನರು ಕತ್ತಲ್ಲಲ್ಲೇ ಬದುಕು ಕಳೆಯಬೇಕಾಗಿದೆ.

ಆರು ತಿಂಗಳೊಳಗೆ ಮನೆ ನಿರ್ಮಾಣ ಮಾಡಿಕೊಡುವದಾಗಿ ಹೇಳಿದ್ದರೂ ಒಂದುವರೆ ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಸಾಕಷ್ಟು ಮನೆಗಳ ಗೋಡೆಗಳನ್ನು ಈಗ ಕಟ್ಟುತ್ತಿದ್ದಾರೆ. ಗೋಡೆಗಳಾಗಿರುವ ಮನೆಗಳಿಗೆ ಕಿಟಕಿ, ಬಾಗಿಲುಗಳು ಆಗಿಲ್ಲ. ನೆಲಕ್ಕೆ ಟೈಲ್ಸ್ ಅಳವಡಿಸಿಲ್ಲ, ಯುಜಿಡಿ ಕೆಲಸವಾಗಿಲ್ಲ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಟ ಆರು ತಿಂಗಳಾದರೂ ಬೇಕು. ಮತ್ತೊಂದೆಡೆ ಮನೆ ಜೊತೆಗೆ ಭೂಮಿಯನ್ನು ನೀಡುತ್ತೇವೆ ಎಂದಿದ್ದ ಸರ್ಕಾರ ಕೊಟ್ಟ ಭರವಸೆಯನ್ನು ಮರೆತಂತೆ ಇದೆ. ಕೃಷಿ ಭೂಮಿಯನ್ನು ನೀಡದಿದ್ದರೆ ಮನೆ ನೀಡುತ್ತಿದ್ದಂತೆ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎನ್ನೋದು ಮುಖಂಡ ಮಲ್ಲ ಅವರ ಆಕ್ರೋಶ. ಒಟ್ಟಿನಲ್ಲಿ ಸಾಕಷ್ಟು ಹೋರಾಟದ ಬಳಿಕ ಸರ್ಕಾರದ ಭರವಸೆಗಳ ಮಹಾಪೂರವನ್ನೇ ನಂಬಿ ತಾವು ಬಾಳಿ ಬದುಕಿದ್ದ ಮೂಲ ಊರನ್ನು ತೊರೆದು ಬಂದಿದ್ದ ದಿಡ್ಡಳ್ಳಿಯ ಜನರ ಬದುಕಿಗೊಂದು ಇನ್ನೂ ನೆಮ್ಮದಿಯ ಸೂರು ಸಿಕ್ಕಿಲ್ಲ. ಈ ಸೂರು ಸಿಕ್ಕರೂ ತಮ್ಮೊದೊಂದು ತುಂಡು ಭೂಮಿ ಎನ್ನೋದು ಸಿಗುತ್ತಾ ಅನ್ನೋ ಆತಂಕ ಜನರಲ್ಲಿ ಮನೆ ಮಾಡಿರೋದಂತೂ ಸತ್ಯ.