ವೀರಾಜಪೇಟೆ, ಅ. 6: ವೀರಾಜಪೇಟೆಯ ತಾಲೂಕು ಕಚೇರಿಯಲ್ಲಿ ಸುಮಾರು ಮೂವತ್ತರಿಂದ ನಲವತ್ತು ದಳ್ಳಾಳಿಗಳ ಹಾವಳಿಯಿಂದ ಇಂದು ಜನ ಸಾಮಾನ್ಯರ ಕೆಲಸ ನೇರವಾಗಿ ಆಗುವದಿಲ್ಲ, ಹಣ ಮತ್ತು ದಳ್ಳಾಳಿಗಳದ್ದೇ ಪಾರುಪತ್ಯ ನಡೆಯುತ್ತಿದೆ. ಹಣಕ್ಕಾಗಿ ಉದ್ದೇಶ ಪೂರಕ ತಪ್ಪು ಮಾಡಿ ಭೂ ಹಿಡುವಳಿದಾರರಿಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ದೂರಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅನಿಲ್ ಅಯ್ಯಪ್ಪ ಅವರು ಭೂ ಹಿಡುವಳಿದಾರರಿಗೆ ಆರ್.ಟಿ.ಸಿಯ ತಪ್ಪು ಮಾಹಿತಿ ನೀಡಿ ಕಚೇರಿಗೆ ಅಲೆದಾಡಿಸುವದು ಸಾಮಾನ್ಯವಾಗಿದೆ. ಇದು ಇತ್ತೀಚಿನ ಜನ ಸಂರ್ಪಕ ಸಭೆಯಲ್ಲಿ ಬಹಿರಂಗವಾಗಿದೆ. ಇಲ್ಲಿ ದಳ್ಳಾಳಿಗಳಿದ್ದು ಅವರಿಗೆ ಇಂತಿಷ್ಟು ಹಣ ನೀಡಿದರೆ ಅವರ ಮೂಲಕ ಕೆಲಸ ನಡೆಯುತ್ತದೆ, ಹಣ ಇಲ್ಲದೆ ಕೆಲಸ ಇಲ್ಲ ಎನ್ನುವಂತಾಗಿದೆ. ಸಂಜೆ ಕಚೇರಿ ಅವಧಿ ಮುಗಿದರೂ ಕತ್ತಲು ಆವರಿಸಿದರೂ ಜನರು ತುಂಬಿರುತ್ತಾರೆ. ಕಾಕೋಟುಪರಂಬುವಿನ ಗ್ರಾಮ ಪಂಚಾಯಿತಿಗೆ ಉದಾರಿಗಳೊಬ್ಬರು ಜಾಗವನ್ನು ನೀಡಿದ್ದಾರೆ. ಆದರೆ ಗ್ರಾಮ ಪಂಚಾಯಿತಿಗೆ ಆರ್.ಟಿ.ಸಿ ಬದಲಾವಣೆಗೆ ಒಂದು ವರ್ಷದ ಹಿಂದೆಯೇ ಕಡತ ಬಂದಿದ್ದರೂ ಇನ್ನು ಗ್ರಾಮ ಪಂಚಾಯಿತಿಗೆ ಆರ್.ಟಿ.ಸಿ ದೊರೆತಿಲ್ಲ. ವೀರಾಜಪೇಟೆ ಗ್ರಂಥಾಲಯದ ಅತಿಕ್ರಮಣದ ಜಾಗದ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಿ 4 ತಿಂಗಳಾದರೂ ಇನ್ನು ಸತಾವಣೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ತಿಂಗಳಿನಲ್ಲಿ ಒಂದು ದಿನವಾದರೂ ತಾಲೂಕು ಕಚೇರಿಗೆ ಬಂದು ದಳ್ಳಾಳಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದರು.
ಜಯಕರ್ನಾಟಕ ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮಂಜುನಾಥ್ ಮಾತನಾಡಿ, ನೊಂದ ಜನರಿಗೆ ಜಿಲ್ಲಾಡಳಿತ ತಕ್ಷಣ ನ್ಯಾಯ ಒದಗಿಸಿ ಸೂಕ್ತ ಸಮಯದಲ್ಲಿ ಭೂ ದಾಖಲೆ ನೀಡುವಂತೆ ಆಗ್ರಹಿಸಿದರು. ಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ಬೆಳ್ಯಪ್ಪ, ಲೋಕೇಶ್ ಮತ್ತು ಹರೀಶ್ ಉಪಸ್ಥಿತರಿದ್ದರು.