ಕೂಡಿಗೆ, ಅ. 6: ಶಿರಂಗಾಲ ಗ್ರಾಮ ಪಂಚಾಯತಿ ಗ್ರಾಮ ಸಭೆಯು ಸ್ಥಳೀಯ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಆಹಾರ, ಇಲಾಖೆ, ಚೆಸ್ಕಾಂ, ಅಬಕಾರಿ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರುಹಾಜರಾದ ಬಗ್ಗೆ ತೀವ್ರ ಚರ್ಚೆ ನಡೆಯಿತು.
ಮುಂದಿನ ದಿನಗಳಲ್ಲಿ ವಿಶೇಷ ಗ್ರಾಮಸಭೆಯನ್ನು ನಡೆಸಿ ಗೈರುಹಾಜರಾದ ಇಲಾಖೆಯ ಅಧಿಕಾರಿಗಳನ್ನು ಕಡ್ಡಾಯವಾಗಿ ಕರೆದು ಸಾರ್ವಜನಿಕರಿಗೆ ಮಾಹಿತಿ ದೊರಕಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಸಭೆಗೆ ಆಗಮಿಸಿದ ಇತರೆ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಿಂದ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಅಪಾಯದ ಸ್ಥಿತಿಯಲ್ಲಿದ್ದು, ಕೂಡಲೆ ಕಂಬಗಳನ್ನು ಬದಲಾಯಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತರ ಹಾಗೂ ವಸತಿ ರಹಿತ ಪಟ್ಟಿಯನ್ನು ಅನುಮೋದಿಸಲಾಯಿತು. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹರಿಗೆ ಸವಲತ್ತು ಒದಗಿಸುವ ಕ್ರಿಯಾ ಯೋಜನೆಯನ್ನು ಅನುಮೋದನೆ ದೊರೆಯಿತು.
ತಾಲೂಕು ಪಂಚಾಯತಿ ಸದಸ್ಯ ಜಯಣ್ಣ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷ ರಮೇಶ್ ಮಾತಾನಾಡಿ, ಗ್ರಾಮಸ್ಥರು ತೆರಿಗೆ ಹಣವನ್ನು ಸಕಾಲದಲ್ಲಿ ಗ್ರಾಮ ಪಂಚಾಯತಿಗೆ ಪಾವತಿ ಮಾಡುವದರ ಮೂಲಕ ಗ್ರಾಮದ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಯೊಂದಿಗೆ ಕೈಜೋಡಿಸ ಬೇಕು ಎಂದರು. ಮುಂದಿನ ದಿನಗಳಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸುವದಾಗಿ ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸರಕಾರ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಕೂಡಿಗೆಯ ಕೃಷಿ ಅಧಿಕಾರಿ ಮಾದವರಾವ್ ಆಗಮಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.