ಗೋಣಿಕೊಪ್ಪಲು, ಅ. 6: ದಿನಬೆಳಗಾದರೆ ಕಾಫಿ ತೋಟ ಧ್ವಂಸ, ಅಡಿಕೆ,ತೆಂಗು,ಬಾಳೆ ಕೃಷಿ ನಾಶ, ಕಾಡಾನೆ ಉಪಟಳದಿಂದ ಲಕ್ಷಾಂತರ ಮೌಲ್ಯದ ಫಸಲು ನಾಶ ಇತ್ಯಾದಿ ವರ್ತಮಾನಗಳು ಕೊಡಗು ಜಿಲ್ಲೆಯಲ್ಲಿ ಸಹಜವಾಗಿದೆ. ರ್ಯಾಪಿಡ್ ರೆಸ್ಪಾನ್ಸ್ ಅರಣ್ಯ ಇಲಾಖೆಯ ತಂಡ ದಿನನಿತ್ಯ ಕಾಡಾನೆ ಹಿಂಡುಗಳನ್ನು ಕಾಫಿ ತೋಟಗಳಿಂದ, ರೈತರ ಮಡಿಗಳಿಂದ ಕಾಡಿಗೆ ಅಟ್ಟುತ್ತಿದ್ದರೂ ಮತ್ತೆ ಮತ್ತೆ ಕಾಡಾನೆಗಳು ಅಲ್ಲಿಯೇ ಪ್ರತ್ಯಕ್ಷ ಗೊಳ್ಳುತ್ತಿವೆ. ಅರಣ್ಯ ಇಲಾಖೆಯ ಪರಿಹಾರ ಮೊತ್ತವೂ ರೈತರ ಕೈಗೆಟುಕುವದು ಅಷ್ಟಕಷ್ಟೆ ಎಂಬಂತಾಗಿದೆ.

ಒಂದೊಮ್ಮೆ ‘ಭತ್ತದ ಕಣಜ’ ಎಂದೇ ಕೊಡಗು ಜಿಲ್ಲೆ ಪ್ರಸಿದ್ಧಿ ಪಡೆದಿತ್ತು. ಇದೀಗ ಆನೆಯ ಭಯ ಭತ್ತದ ಗದ್ದೆಯನ್ನು ಪಾಳುಬಿಡಲು ಕಾರಣವಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ ಭತ್ತದ ಉತ್ಪಾದನೆ ಕುಂಠಿತವಾಗುತ್ತಿದೆ.

ಇತ್ತೀಚೆಗಿನ ಜಲಪ್ರಳಯವೂ ಜಿಲ್ಲೆಯ ಕಾಫಿ, ಕಾಳುಮೆಣಸು ಇತ್ಯಾದಿ ವಾಣಿಜ್ಯ ಬೆಳೆಗಾರರನ್ನು ಕಂಗೆಡಿಸಿದೆ. ಇಂತಹ ಸಂದರ್ಭ ಗೋಣಿಕೊಪ್ಪಲಿನ ಕೆವಿಕೆ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ‘ವಾಣಿಜ್ಯ ಕೃಷಿಯಾಗಿ ಔಷಧಿ ಸಸ್ಯಗಳ ಕಾರ್ಯಾಗಾರ’ ಜಿಲ್ಲೆಯ ರೈತರಲ್ಲಿ ಹೊಸ ಆಶಾವಾದವನ್ನು ಮೂಡಿಸಲು, ಅವಕಾಶದ ಬಾಗಿಲನ್ನು ತೆರೆಯಲು ಮುಂದಾಗಿದೆ.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜು ಜಾರ್ಜ್ ಅವರ ಪ್ರಕಾರ ಕೆವಿಕೆ ಈವರೆಗೂ ತೋಟಗಾರಿಕೆ ಬೆಳೆಗಳು, ಉಪ ಕೃಷಿಗೆ ಹಲವು ಮಾರ್ಗೋಪಾಯದ ಕಾರ್ಯಕ್ರಮ ಗಳನ್ನು ನಡೆಸುತ್ತಾ ಬಂದಿದ್ದರೂ, ಔಷಧಿ ಸಸ್ಯಗಳ ಕೃಷಿಯ ಕುರಿತಾದ ಕಾರ್ಯಕ್ರಮ ಏರ್ಪಡಿಸಿರುವದು ಇದೇ ಮೊದಲು. ನಾವು ಜಿಲ್ಲೆಯ ಜನತೆಯ ನೋವಿಗೆ ಸ್ಪಂದಿಸಬೇಕಾದಲ್ಲಿ ಇಂತಹ ಸಕಾರಾತ್ಮಕ ಕೃಷಿ ಪದ್ಧತಿಯನ್ನು ಜಿಲ್ಲೆಯ ರೈತರು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪೂರಕ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೀಗ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಔಷಧೀಯ ಸಸ್ಯಗಳ ಉದ್ಯಮಕ್ಕೆ ಒತ್ತು ನೀಡುವಂತಹ ಹಲವು ಕಾರ್ಯಯೋಜನೆಗಳನ್ನು ಮುಂದೆ ಹಾಕಿಕೊಳ್ಳಲಿದ್ದೇವೆ ಎಂದು ಹೇಳಿದರು.

ಕೆವಿಕೆ ಆವರಣದಲ್ಲಿ ಪುರಾಣ ಪ್ರಸಿದ್ಧ ಅಶೋಕ ವೃಕ್ಷದ ಸಸಿಯನ್ನು ನೆಟ್ಟು ಮಾತನಾಡಿದ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಬೋಧ ಸ್ವರೂಪಾನಂದ ಸ್ವಾಮೀಜಿ ಅವರು, ಮುಂದೆ ಪೆÇನ್ನಂಪೇಟೆಯಲ್ಲಿಯೂ ಸಾವಿರ ರೈತರಿಗೆ ಔಷಧಿ ಸಸ್ಯ ಉದ್ಯಮದ ಕುರಿತು ಕಾರ್ಯಾ ಗಾರಕ್ಕೆ ಸಹಕಾರ ನೀಡುವದಾಗಿ ಘೋಷಣೆ ಮಾಡಿದರು.

ಮೊದಲ ಹಂತವಾಗಿ ಗೋಣಿಕೊಪ್ಪಲು ಕೆವಿಕೆಯ ಅತ್ತೂರು ಫಾರಂ, ರಾಮಕೃಷ್ಣ ಆಶ್ರಮದ ತೋಟ ಹಾಗೂ ಅರಣ್ಯಕಾಲೇಜಿನಲ್ಲಿ ಇಲ್ಲಿನ ಹವಾಗುಣಕ್ಕೆ ತಕ್ಕುದಾದ ಹಾಗೂ ಕಾಡಾನೆಗಳು ಮುಟ್ಟದ ವಿವಿಧ ಲಾಭದಾಯಕ ಔಷಧೀಯ ಸಸ್ಯಗಳನ್ನು ಬೆಳೆದು ಮಾರಾಟ ಮಾಡುವ ಮೂಲಕ ಇಲ್ಲಿನ ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು ಎಂಬ ಚರ್ಚೆಯೂ ನಡೆಯಿತು.

ನಂಜನಗೂಡು ಕಂಪೆನಿ ಜಿಲ್ಲೆಯ ಔಷಧಿ ಸಸ್ಯ ಖರೀದಿಗೆ ಉತ್ಸಾಹ

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧೀಜಿ ಅವರ ಪ್ರಶಂಸೆಗೆ ಒಳಗಾಗಿದ್ದ, 105 ವರ್ಷ ಇತಿಹಾಸವಿರುವ ನಂಜನಗೂಡು ಹಲ್ಲುಪುಡಿ ಖ್ಯಾತಿಯ ಬಿ.ವಿ. ಪಂಡಿತ್ ಅವರ ‘ಸದ್ವೈದ ಶಾಲಾ ಪ್ರ್ರೆವೇಟ್ ಲಿಮಿಟೆಡ್ ಕಂಪೆನಿ’ ಕೊಡಗಿನಲ್ಲಿ ಬೆಳೆದ ಔಷಧೀಯ ಸಸ್ಯಗಳನ್ನು ಖರೀದಿಸಲು ಉತ್ಸುಕವಾಗಿದೆ ಎಂದು ಅಯುರ್ವೇದ ಡಾ. ಸತ್ಯನಾರಾಯಣ ಭಟ್ ಅವರು ಮಾಹಿತಿ ನೀಡಿದ್ದಾರೆ.

ಆಡುಸೋಗೆ ಎಂಬ ಔಷಧಿಯ ಗಿಡವನ್ನು ಕೊಡಗಿನ ಕಾಫಿ ತೋಟಗಳ ಬೇಲಿಗೆ ಬಳಸಬಹುದು. ಇದಕ್ಕೆ ಟನ್‍ಗಟ್ಟಲೆ ಬೇಡಿಕೆ ಇದೆ. ಅಸ್ತಮಾ ರೋಗ ನಿವಾರಕ ಗಿಡಗಳನ್ನು (ಕಡ್ಡಿಗಳು) ಕೊಡಗಿನ ರೈತರಿಗೆ ಯಾವದೇ ಪ್ರಮಾಣದಲ್ಲಿ ನೀಡಲು ಸಿದ್ಧ ಎಂದಿದ್ದಾರೆ. ಇದನ್ನು ಆನೆ ತಿನ್ನುವದಿಲ್ಲ. ಇನ್ನು ಒಂದೆಲಗ (ಬ್ರಾಹ್ಮಿ) ವಿಶ್ವದ ಎಲ್ಲೆಡೆ ಬೇಡಿಕೆ ಇರುವ ಸಸ್ಯ. ಇದು ಕೊಡಗಿನ ಮಡಿಗಳಲ್ಲಿಯೂ ಹೇರಳವಾಗಿ ಕಂಡು ಬಂದಿದ್ದು, ಉತ್ತಮ ದರದಲ್ಲಿ ಖರೀದಿಸಲಾಗುವದು ಎಂದು ತಿಳಿಸಿದ್ದಾರೆ.

ಕಾಫಿ ತೋಟಗಳಲ್ಲಿ ನೆರಳಿಗೆ ಅಶೋಕ ಮರವನ್ನು ಬೆಳೆಸಿದ್ದಲ್ಲಿ ಇದಕ್ಕೂ ಉತ್ತಮ ಮಾರುಕಟ್ಟೆ ಲಭ್ಯವಿದೆ ಎಂದು ಹೇಳಿದರು. ಇದರೊಂದಿಗೆ ಶತಾವರಿ(ಹಲವು ಮಕ್ಕಳ ತಾಯಿ)ನನ್ನಾರಿ, ಮರ ಹರಶಿನ, ರಕ್ತಚಂದನ, ಬೇಂಗೆ, ಊದಿಮರ, ಮಂಜಿಷ್ಠ, ಪಿಲ್ಲಂಬಳ್ಳಿ, ಸೊಗದೆ ಬೇರು ಇತ್ಯಾದಿಗಳನ್ನು ಜಿಲ್ಲೆಯಲ್ಲಿ ಕೃಷಿ ಮಾಡಿ ರೈತರು ಕಾಫಿ, ಕಾಳುಮೆಣಸು, ಅಡಿಕೆ, ಬಾಳೆ ಇತ್ಯಾದಿಗಳಿಗೆ ಪರ್ಯಾಯ ಮಾರ್ಗೋಪಾಯ ಕಂಡು ಕೊಳ್ಳಬಹುದು ಎಂದು ಹೇಳಿದರಲ್ಲದೆ, ಮುಂದಿನ ಅರಣ್ಯ ಕಾಲೇಜು ಅಥವಾ ಶ್ರೀ ರಾಮಕೃಷ್ಣ ಶಾರಧಾಶ್ರಮದಲ್ಲಿ ಜರುಗುವ ಉಚಿತ ಅಯುರ್ವೇದ ಚಿಕಿತ್ಸಾ ಕಾರ್ಯಕ್ರಮ, ರೈತರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಖರೀದಿದಾರರನ್ನೂ ಕರೆತರಲಾಗುವದು ಎಂದು ವಿವರಿಸಿದರು.

ಉದ್ಯಮಿಗಳಾಗಲಿರುವ ವಿದ್ಯಾರ್ಥಿಗಳು

ಅರಣ್ಯ ಕಾಲೇಜಿನಲ್ಲಿಯೂ ಸುಮಾರು 55 ವಿದ್ಯಾರ್ಥಿಗಳು ಔಷಧಿ ಸಸ್ಯಗಳ ಕುರಿತು ಸಂಶೋಧನೆ ಕೈಗೊಂಡಿದ್ದು, ಮುಂದೆ ಅವರು ಸರ್ಕಾರಿ ಇತ್ಯಾದಿ ಉದ್ಯೋಗ ಬಯಸದೆ ತಾವೇ ಔಷಧಿ ಸಸ್ಯ ಬೆಳೆದು, ಮಾರಾಟ ಮಾಡಿ ಉದ್ಯಮಿಗಳಾಗುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಪೆÇನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ತಿಳಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಲಭ್ಯವಿರುವ ಔಷಧಿ ಸಸ್ಯಗಳ ಖರೀದಿ ಹಾಗೂ ಮಾರಾಟವನ್ನು ಸಣ್ಣ ಪ್ರಮಾಣದಲ್ಲಿ ಮಾಡಲಾಗುತ್ತಿದೆ.

ಮುಂದೆ ಜಿಲ್ಲೆಯ ಕೃಷಿಕರಿಗೆ ಲಾಭ ತಂದುಕೊಡುವ ನಿಟ್ಟಿನಲ್ಲಿಯೂ ಶ್ರಮಿಸಲಾಗುವದು ಎಂದು ಹೇಳಿದ್ದಾರೆ.

ಊಟಿ ಹಾಗೂ ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ಸೇವೆ ಸಲ್ಲಿಸಿದ್ದ ಶ್ರೀ ಧರ್ಮಾತ್ಮಾನಂದ ಸ್ವಾಮೀಜಿ ಅವರು ಕಳೆದ 30 ವರ್ಷಗಳಿಂದ ಬೆಂಗಳೂರು ಲಾಲ್‍ಬಾಗ್ ‘ಫಲಪುಷ್ಪ ಪ್ರದರ್ಶನ’ದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಕೊಡಗಿನ ಔಷಧಿ ಸಸ್ಯಗಳ ದಾಖಲೀಕರಣ, ಪುಷ್ಫೋದ್ಯಮ ಹಾಗೂ ತರಕಾರಿ ಕೃಷಿಗೂ ತಾವು ಸಹಕಾರ ನೀಡುವದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೆವಿಕೆ ಆವರಣದಲ್ಲಿ ಜರುಗಿದ ಕಾರ್ಯಾಗಾರ ಅರ್ಥಪೂರ್ಣವಾಗಿತ್ತು.

ಕೊಡಗು ಜಿಲ್ಲಾ ಪಾರಂಪರಿಕ ವೈದ್ಯ ಪರಿಷತ್ ಸಂಚಾಲಕಿ ಬಿ.ಪಿ. ಚಿತ್ರಾವತಿ, ಕೆ.ವಿ.ಕೆ ವಿಜ್ಞಾನಿಗಳು, ಡಾ. ಸತ್ಯನಾರಾಯಣ ಭಟ್ ಅವರ ಪೂರಕ ಮಾಹಿತಿ, ಕಾರ್ಯಕ್ರಮ ಸಂಯೋಜಕ ಟಿ.ಎಲ್. ಶ್ರೀನಿವಾಸ್ ಅವರ ಪ್ರಯತ್ನದೊಂದಿಗೆ ‘ಕೊಡಗಿನಲ್ಲಿ ವಾಣಿಜ್ಯ ಕೃಷಿಯಾಗಿ ಔಷಧಿ ಸಸ್ಯಗಳು’ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.

ಕೆವಿಕೆಯ ವಿಷಯ ತಜ್ಞರಾದ ಕೆ.ವಿ. ವೀರೇಂದ್ರಕುಮಾರ್, ಪ್ರಭಾಕರ್ ಅವರುಗಳು ಇಂತಹ ಕಾರ್ಯಕ್ರಮಗಳು ವರ್ಷಂಪ್ರತಿ ನಡೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಸುದ್ದಿ ಸಂಸ್ಥೆ-ಗೋಣಿಕೊಪ್ಪಲು.