ಕರಿಕೆ, ಅ. 5: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ, ಜಲಪ್ರಳಯಕ್ಕೆ ಸಿಲುಕಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗಿನ ಮದೆನಾಡು ಮತ್ತು ಜೋಡುಪಾಲದ ಮಧ್ಯೆ ಹಿಂದಿನಿಂದಲೂ ವಾಸವಾಗಿದ್ದ ಕೆಲ ಮನೆಯವರ ಸಮಸ್ಯೆಗಳಿಗೆ ಇನ್ನೂ ಕೂಡ ಸಂಬಂದ ಪಟ್ಟ ಅಧಿಕಾರಿಗಳಿಂದ ಪರಿಹಾರದ ಸ್ಪಷ್ಟವಾದ ಮಾಹಿತಿಗಳು ಸಿಗದೆ ಇಲ್ಲಿನ ಜನ ಕಂಗಾಲಾಗಿದ್ದಾರೆ.

ಗಂಜಿ ಕೇಂದ್ರದಲ್ಲಿ ಸದ್ಯಕ್ಕೆ ಊಟ-ತಿಂಡಿಗೆ ಯಾವದೇ ಕೊರತೆ ಇಲ್ಲ. ಆದರೆ ಇಲ್ಲಿ ಸಮಸ್ಯೆ ಎಂದರೆ ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿವೆ, ಇನ್ನೂ ಕೆಲ ಮನೆಗಳಿಗೆ ಚಿಕ್ಕಪುಟ್ಟ ಬಿರುಕುಗಳು, ಇನ್ನುಳಿದ ಮನೆಗಳ ಪೈಕಿ ಕೆಲವು ಮನೆಗಳು ಮಾತ್ರ ಭದ್ರವಾಗಿವೆ ಆದರೆ ವಾಸಮಾಡಲು ಆಗುತ್ತಿಲ್ಲ.

ಈ ಬಗ್ಗೆ ಮದೆನಾಡು ಗ್ರಾಮ ಪಂಚಾಯತ್‍ನಲ್ಲಿ ವಿಚಾರಿಸಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ನಿರಾಶ್ರಿತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

"ನಿಮ್ಮ ಹೆಸರು ನಮ್ಮ ಪಟ್ಟಿಯಲ್ಲಿ ಇಲ್ಲ" ಎಂಬ, ಮುಂದಿನ ದಿನಗಳಲ್ಲಿ ಬರಬಹುದು ಎಂಬ ದ್ವಂದ್ವ ಉತ್ತರವನ್ನು ನೀಡುತ್ತಿ ದ್ದಾರೆಂದು ಅಳಲು ವ್ಯಕ್ತಪಡಿಸುತ್ತಾರೆ.

ಮದೆನಾಡು ಗ್ರಾಮ ಪಂಚಾಯತ್‍ಗೆ ಒಳಪಟ್ಟ ದಯಮಣಿ, ರತ್ನಾವತಿ ಬಿ.ಕೆ, ವಿಶ್ವ ಪೂಜಾರಿ, ಬಿ.ವೈ ಲಿಂಗಪ್ಪ, ಶೇಷಪ್ಪ ನಾಯ್ಕ್,ರಾಜೇಶ್, ಗಣೇಶ್, ಕಾರ್ಯಪ್ಪ ಮತ್ತು ಇನ್ನೂ ಕೆಲಮನೆಗಳ ಇಂದಿನ ನೈಜ ಸ್ಥಿತಿಯ ಬಗ್ಗೆ ‘ಶಕ್ತಿ’ಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.

ಕಿರ್ಗೂರ್ ವ್ಯಾಪ್ತಿಯ ಬಿ.ವೈ ಲಿಂಗಪ್ಪ ಅವರ ಅಲ್ಪ ಸ್ವಲ್ಪ ಕೃಷಿ ಜಾಗ ಬಿರುಕು ಬಿಟ್ಟಿದ್ದು ಭೂವಿಜ್ಞಾನಿಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ, ಆದರೆ ಅವರ ಹೆಸರು ಕೂಡ ನಿರಾಶ್ರಿತರ ಪುನರ್ ನಿವೇಶನದ ಪಟ್ಟಿಯಲ್ಲಿ ಹೆಸರು ಮಾಯವಾಗಿದೆ.

ಮಳೆ ಕಡಿಮೆಯಾಗುತ್ತ ಬಂದಿದೆ. ಆದರೆ ಮಳೆನಿಂತ ಮೇಲೆ ನಾವು ಎಲ್ಲಿಗೆ ಹೋಗುವದು, ಎಲ್ಲಿ ಇರುವದು, ಸರ್ಕಾರದಿಂದ ಯಾವದೇ ಸ್ಪಷ್ಟವಾದ ಮಾಹಿತಿ ಸಿಗುತ್ತಿಲ್ಲ ಕೇವಲ ಒಂದು ಬಾರಿ ಮಾತ್ರ ರೂ. 3,800 ಹಣ ಬಿಟ್ಟರೆ ಮತ್ತಾವದೇ ಅನುದಾನ ಈವರೆಗೆ ಸಿಕ್ಕಿಲ್ಲ. ನಮ್ಮ ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆ ಕ್ಷಣ ಕ್ಷಣ ಕಾಡತೊಡಗಿದೆ. ರಾತ್ರಿ ಹೊತ್ತು ಗಂಜಿಕೇಂದ್ರದಲ್ಲಿದ್ದು ಬೆಳಿಗ್ಗೆ ತಾವು ವಾಸಿಸುತ್ತಿದ್ದ ಮನೆಹತ್ತಿರ ಬಂದು ಸಣ್ಣ ಪುಟ್ಟ ಕೆಲಸ,ವ್ಯಾಪಾರ,ಕೂಲಿ ನಾಲಿ ಮಾಡಿಕೊಂಡು ಬದುಕುವ ಜನರ ಸ್ಥಿತಿ ಊಹಿಸಲೂ ಅಸಾಧ್ಯವಾಗಿದೆ.

ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಷ್ಟಗಳನ್ನು ನಿವಾರಣೆ ಮಾಡಬೇಕು ಎಂದು ಅಂಗಲಾಚುತ್ತಿದ್ದಾರೆ.