ಭಾಗಮಂಡಲ, ಅ. 5: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ಕಟ್ಟು ವಿಧಿಸುವ ಕಾರ್ಯ ಇಂದು ನೆರವೇರಿತು.

ತಲಕಾವೇರಿ ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮೂಲಕ ಭಾಗಮಂಡಲ ನಾಡಿನ ಎಲ್ಲಾ ಗ್ರಾಮಗಳಲ್ಲಿರುವ ದೇವಾಲಯಗಳ ತಕ್ಕಮುಖ್ಯಸ್ಥರು, ಸಮಿತಿ ಸದಸ್ಯರು, ಅರ್ಚಕರು ಸೇರಿ ರವಿ ಹೆಬ್ಬಾರ್ ಅವರ ಮನೆಗೆ ತೆರಳಿ ಬಾಳೆಗೊನೆ ಕಡಿದು ನಾದಸ್ವರ ದೊಂದಿಗೆ ಮೆರವಣಿಗೆ ಮೂಲಕ ಭಗಂಡ ಸನ್ನಿಧಿಗೆ ತಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ‘ ತಪ್ಪಡ್ಕ’ (ಕಟ್ಟು ಬೀಳುವದು) ವಿಧಿಸಲಾಯಿತು. ಇಂದಿನಿಂದ ಜಾತ್ರೆ ಮುಗಿಯು ವವರೆಗೆ ನಾಡಿನಲ್ಲಿ ಮಧು, ಮಾಂಸ ಸೇವನೆ ಮಾಡುವಂತಿಲ್ಲ, ಮರಗಳನ್ನು ಕಡಿಯುವಂತಿಲ್ಲ, ಬೆಳಿಗ್ಗೆ 10.15ಕ್ಕೆ ಸಲ್ಲುವ ಆಜ್ಞಾ ಮುಹೂರ್ತ ದಲ್ಲಿ ವೃಶ್ಚಿಕ ಲಗ್ನದಲ್ಲಿ ಈ ಶುಭ ಕಾರ್ಯ ನೆರವೇರಿತು. ತಾ. 15 ರಂದು ಬೆಳಿಗ್ಗೆ 10.25ಕ್ಕೆ ವೃಶ್ಚಿಕ ಲಗ್ನದಲ್ಲಿ ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಕಾರ್ಯ ನೆರವೇರಲಿದೆ.

ಕಠಿಣ ಕ್ರಮ

ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಇಂದಿನಿಂದ ಜಾತ್ರೆ ಮುಗಿಯುವವರೆಗೆ ಭಾಗಮಂಡಲ ನಾಡಿನಲ್ಲಿ ಮೀನು, ಮಾಂಸ ಮಾಡುವಂತಿಲ್ಲ. ಮರ ಕಡಿಯಬಾರದು ಹಳೇ ಪದ್ಧತಿಯಂತೆ ಉತ್ಸವ ಆಚರಿಸುವಂತಾಗಬೇಕು. ಒಂದು ವೇಳೆ ಉಲ್ಲಂಘನೆ ಮಾಡಿರುವದು ಕಂಡುಬಂದಲ್ಲಿ ಅಂತವರÀ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಗ್ರಾ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಸಮಿತಿ ಸದಸ್ಯರುಗಳಾದ ಕೆ.ಟಿ. ರಮೇಶ್, ಅಣ್ಣಯ್ಯ, ರವಿ ಹೆಬ್ಬಾರ್, ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ಕುದುಕುಳಿ ಭರತ್, ಅರ್ಚಕ ಹರೀಶ್ ಭಟ್, ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಪಾರು ಪತ್ತೆಗಾರ ಪೊನ್ನಣ್ಣ ಇನ್ನಿತರರಿದ್ದರು.