ಮಡಿಕೇರಿ, ಅ. 5: ಮಡಿಕೇರಿಯಲ್ಲಿರುವ ಜಿಲ್ಲಾ ಕ್ರೀಡಾಂಗಣವನ್ನು ಸಮರ್ಪಕವಾಗಿ ಸರಿಪಡಿಸುವ ಕುರಿತು ತ್ವರಿತ ಕೆಲಸವನ್ನು ನಿರ್ವಹಿಸಲಾಗುವದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ತಿಳಿಸಿದ್ದಾರೆ.
ತಾ. 3 ರಂದು ‘ಶಕ್ತಿ’ಯಲ್ಲಿ ಕ್ರೀಡಾಂಗಣದ ಅವ್ಯವಸ್ಥೆ ಕುರಿತು ಪ್ರಕಟಗೊಂಡ ವರದಿಯ ಹಿನ್ನೆಲೆಯಲ್ಲಿ ಇಂದು ಕ್ರೀಡಾಂಗಣ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕ್ರೀಡಾಂಗಣ ವ್ಯಾಪ್ತಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ವಾರದಲ್ಲಿ ಇದನ್ನು ಪೂರ್ತಿಗೊಳಿಸಲಾಗುವದು. ಕಸವಿಲೇವಾರಿಗೆ ಸಂಬಂಧಿಸಿದಂತೆ ನಗರಸಭೆಯೊಂದಿಗೆ ಚರ್ಚಿಸಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯದ ಶೌಚಾಲಯಗಳು ಹಾನಿಗೀಡಾಗಿತ್ತು. ಇದನ್ನು ಕೂಡ ಸರಿಪಡಿಸಲಾಗುತ್ತಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಈಜುಕೊಳದ ಒಳಗೆ ನೀರು ತುಂಬಿ ಮೋಟಾರು ಕೆಟ್ಟು ನಿಂತಿದೆ. ಈಗಾಗಲೇ ಇದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಕಿರಣ್ ಕಾರ್ಯಪ್ಪ ತಿಳಿಸಿದ್ದಾರೆ.
ಮೈದಾನದಲ್ಲಿ ಬೆಳೆದಿರುವ ಹುಲ್ಲು, ಕಾಡನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕಸವನ್ನು ವಾಹನದಲ್ಲಿ ತುಂಬಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಕುರಿತು ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಕ್ರೀಡಾಂಗಣದ ಮೇಲ್ಛಾವಣಿ ದುರಸ್ತಿ, ಈಜುಕೊಳಕ್ಕೆ ಎಲ್‍ಇಡಿ ಲೈಟ್ ಅಳವಡಿಕೆ, ಷಟಲ್ ಕೋರ್ಟ್‍ನ ಮೇಲ್ಛಾವಣಿ ದುರಸ್ತಿ ಕಾಮಗಾರಿಗೆ 2018-19ನೇ ಸಾಲಿನ ಜಿ.ಪಂ. ಅನುದಾನದಲ್ಲಿ ಹಣ ಮೀಸಲಿರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೆಲಸ ಪೂರ್ಣಗೊಳಿಸ ಲಾಗುವದು, ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳನ್ನು ಶನಿವಾರ ಅಪರಾಹ್ನ ಹಾಗೂ ಭಾನುವಾರ ಸಾಯಿ ಸಿಂಥೆಟಿಕ್ ಟರ್ಫ್ ಮೈದಾನಕ್ಕೆ ಕರೆದೊಯ್ದು ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿರುವ ಕಿರಣ್, ಬಾಕ್ಸಿಂಗ್ ಕೋರ್ಟ್, ಸ್ಕ್ವಾಷ್ ಕೋರ್ಟ್ ಕುರಿತು ಮಾಹಿತಿ ಪಡೆದು ಪ್ರತಿಕ್ರಿಯಿಸಲಾಗು ವದು, ಕ್ರೀಡಾ ವಸತಿ ನಿಲಯದಲ್ಲಿ ಮಕ್ಕಳಿಗೆ ನೀಡುತ್ತಿದ್ದ ಆಹಾರದ ವಿಚಾರದಲ್ಲೂ ದೂರುಗಳಿದ್ದು, ಇದನ್ನು ಇದೀಗ ಬಹುತೇಕ ಸರಿಪಡಿಸಲಾಗಿದೆ.
ಪ್ರಸ್ತುತ ಅಧಿಕಾರದಲ್ಲಿರುವ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್ ಅವರು ಕೊಡಗು ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ಹೊಂದಿದ್ದಾರೆ. ಆದರೂ ಇತ್ತೀಚೆಗಷ್ಟೆ ನೇಮಕಗೊಂಡಿರುವ ಈ ಅಧಿಕಾರಿ ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಿ ದ್ದಾರೆ. ತಾವು ಕೂಡ ಜೂನ್ 28 ರಿಂದ ಸ್ಥಾಯಿ ಸಮಿತಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ವಿವಿಧ ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸುವ ಪ್ರಯತ್ನ ದಲ್ಲಿರುವದಾಗಿ ಮಾಹಿತಿ ನೀಡಿದ್ದಾರೆ.
 
						