ಸೋಮವಾರಪೇಟೆ,ಅ.5: ಪಡಿತರ ಚೀಟಿಯನ್ನು ಸಮರ್ಪಕವಾಗಿ ವಿತರಿಸುವ ಸಂಬಂಧ ತಾಲೂಕು ಕಚೇರಿಯಲ್ಲಿರುವ ಆಹಾರ ಇಲಾಖಾ ಕಚೇರಿಗೆ ಈಗಾಗಲೇ ಒಂದು ಪ್ರಿಂಟರ್ ಒದಗಿಸಲಾಗಿದ್ದು, ಇನ್ನೂ ಹೆಚ್ಚುವರಿ ಪ್ರಿಂಟರ್ ಹಾಗೂ ಕಂಪ್ಯೂಟರ್ ಒದಗಿಸಲಾಗುವದು ಎಂದು ತಾಲೂಕು ತಹಶೀಲ್ದಾರ್ ಮಹೇಶ್ ತಿಳಿಸಿದರು.ಆಹಾರ ಇಲಾಖಾ ಕಚೇರಿಯ ಅಸಮರ್ಪಕ ಕಾರ್ಯ ನಿರ್ವಹಣೆ ಹಿನ್ನೆಲೆ ನಿನ್ನೆ ದಿನ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ, ಮಾಧ್ಯಮದವರೊಂದಿಗೆ ಮಾತನಾಡಿದ ತಹಶೀಲ್ದಾರ್, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಆಹಾರ ನಿರೀಕ್ಷಕರಿಗೆ ಸೂಚಿಸಲಾಗಿದೆ ಎಂದರು.ಆಹಾರ ಇಲಾಖಾ ಕಚೇರಿಯ ಕಂಪ್ಯೂಟರ್ ಹಾಗೂ ಪ್ರಿಂಟರ್‍ಗಳು ಕೆಟ್ಟುಹೋಗಿದ್ದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಅಲ್ಲದೆ ನಾಗರಿಕರನ್ನು ಖಾಸಗಿ ಕಂಪ್ಯೂಟರ್ ಸೆಂಟರ್‍ಗೆ ಕಳುಹಿಸುತ್ತಿರುವದಾಗಿ ಸಾರ್ವಜನಿಕರು ದೂರಿದ ಹಿನ್ನೆಲೆ, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಉಪ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಕಚೇರಿಗೆ ತಕ್ಷಣಕ್ಕೆ ಪ್ರಿಂಟರ್ ಒದಗಿಸಲಾಗಿದೆ. ಪಡಿತರ ಚೀಟಿಯನ್ನು ಕಚೇರಿಯಲ್ಲೇ ವಿತರಿಸುವಂತೆ ಸೂಚಿಸಲಾಗಿದೆ. ಶೀಘ್ರದಲ್ಲೇ ಹೆಚ್ಚುವರಿ ಪ್ರಿಂಟರ್ ಮತ್ತು ಕಂಪ್ಯೂಟರ್ ಒದಗಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಮಹೇಶ್ ತಿಳಿಸಿದರು.
ಇದರೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೊಂದಿಗೆ ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹೋಬಳಿ ಮಟ್ಟದಲ್ಲಿ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖಾ ನಿರೀಕ್ಷರಿಗೆ ಸೂಚನೆ ನೀಡಲಾಗಿದೆ ಎಂದರು.