ಕುಶಾಲನಗರ, ಅ. 4: ಸೋಮವಾರಪೇಟೆ ತಾಲೂಕು ಆಹಾರ ನಿರೀಕ್ಷಕರ ಮೇಲೆ ಗ್ರಾಹಕರ ಆರೋಪದ ವರದಿ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರಕರಣದ ಬಗ್ಗೆ ತನಿಖೆ ನಡೆಸಲು ಕ್ರಮಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಉಪ ವಿಭಾಗಾಧಿಕಾರಿ ಜವರೇಗೌಡ ಅವರು ಕುಶಾಲನಗರಕ್ಕೆ ಭೇಟಿ ನೀಡಿದ್ದು ಮಾಹಿತಿ ಕಲೆಹಾಕಿದರು.
ಆಹಾರ ನಿರೀಕ್ಷಕ ರಾಜಣ್ಣ ಕುಶಾಲನಗರ ಪಟ್ಟಣದ ಕಟ್ಟಡವೊಂದರಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪಡಿತರ ಚೀಟಿ ವಿತರಿಸುವ ಸಂದರ್ಭ ಹಣಕ್ಕೆ ಬೇಡಿಕೆ ಇಡುತ್ತಿರುವದಾಗಿ ಆರೋಪ ಕೇಳಿಬಂದಿತ್ತು. ಕೆಲವು ಖಾಸಗಿ ವ್ಯಕ್ತಿಗಳ ಮೂಲಕ ಗ್ರಾಹಕರಿಂದ ಹಣಕ್ಕೆ ಬೇಡಿಕೆ ಇಡುತ್ತಿರುವದಾಗಿ ಸ್ಥಳೀಯ ಸಂತೋಷ್ ಎಂಬವರು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದರು. ಉಪ ವಿಭಾಗಾಧಿಕಾರಿಗಳು ದೂರುದಾರ ಸಂತೋಷ್ ಮತ್ತು ಕಂದಾಯಾಧಿಕಾರಿಗಳಿಂದ ಪ್ರಕರಣದ ಬಗ್ಗೆ ವಿವರ ಪಡೆದರು. ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವದಾಗಿ ಉಪ ವಿಭಾಗಾಧಿಕಾರಿ ಜವರೇಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
 
						