ಸುಂಟಿಕೊಪ್ಪ, ಅ. 4: ಮಾರುಕಟ್ಟೆ ಬಳಿ ಮಹಿಳಾ ಸಮಾಜದ ಕಟ್ಟಡದಲ್ಲಿ ಜ್ಞಾನದಾರ ಶಿಶುವಿಹಾರ ಕೇಂದ್ರವಿದೆ. ಪುಟಾಣಿ ಮಕ್ಕಳು ದಿನನಿತ್ಯ ಬಂದು ಕಲಿತು ಹಿಂತೆರಳುತ್ತಾರೆ. ಈ ಮಹಿಳಾ ಸಮಾಜದ ಕಟ್ಟಡದ ಹಿಂಭಾಗದಲ್ಲಿ ರಾಶಿಗಟ್ಟಲೆ ಬ್ರಾಂದಿ ಅಂಗಡಿಯ ಖಾಲಿ ತೊಟ್ಟೆ ಕಸ ತ್ಯಾಜ್ಯ ವಸ್ತುಗಳನ್ನು ಮೂಟೆಗಳಲ್ಲಿ ಕಟ್ಟಿ ಎಸೆದು ವಾತಾವರಣ ಕಲುಷಿತಗೊಳಿಸುತ್ತಿದ್ದಾರೆ.ಎಂದು ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾವತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮೀಪದಲ್ಲಿ ಪದವಿ ಪೂರ್ವ ಕಾಲೇಜು, ಚಾಮುಂಡೇಶ್ವರಿ ದೇವಸ್ಥಾನ, ಸಾರ್ವಜನಿಕ ವಾಸದ ಮನೆಗಳು ಇದ್ದು ಇಲ್ಲಿ ಕಸ ಹಾಕುತ್ತಿದ್ದು ಇದರಿಂದ ರೋಗ ರುಜಿನ ಹರಡುವದಕ್ಕೆ ಮುಕ್ತ ಮಾರ್ಗ ನೀಡಿದಂತ್ತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಪಿಡಿಓ ಅವರಿಗೆ ತಿಳಿಸಿ ಇದಕ್ಕೆ ಕಡಿವಾಣ ಹಾಕಿ ಇದನ್ನು ತೆರವು ಗೊಳಿಸಿ ಎಂದು ಅನೇಕ ಬಾರಿ ಮನವಿ ನೀಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಪುಟಾಣಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ ಯಾರು ಕಾರಣಕರ್ತರು ಎಂದು ಮಹಿಳಾ ಸಮಾಜದ ಅಧ್ಯಕ್ಷೆ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಾಂದಿ ಅಂಗಡಿಯ ಮದ್ಯದ ಖಾಲಿ ತೊಟ್ಟೆಗಳನ್ನು ಮೂಟೆಗಟ್ಟಲೆ ತಂದು ಇಲ್ಲಿ ಸುರಿದು ಹೋಗುತ್ತಾರೆ. ಈ ಬಗ್ಗೆ ಪಂಚಾಯಿತಿಯವರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಶಾಸಕ ಅಪ್ಪಚ್ಚುರಂಜನ್ ಅವರ ಗಮನಕ್ಕೆ ತಂದಿದೆ. ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
 
						