ಶನಿವಾರಸಂತೆ, ಅ. 4: ಸಮೀಪದ ಗುಡುಗಳಲೆಯ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಸಭೆ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಕೊಡಗು ಜಿಲ್ಲೆ ಇತ್ತೀಚಿನ ಪ್ರಕೃತಿ ವಿಕೋಪದಿಂದ ತತ್ತರಿಸಿ ಹೋಗಿದ್ದು, ಇಲ್ಲಿನ ಜನಜೀವನ ಸುಧಾರಿಸಲು ಸಾಕಷ್ಟು ಸಮಯ ಬೇಕಾಗಿದೆ ಎಂದು ಸಭೆಯಲ್ಲಿ ತಿಳಿಸಿ ದುರ್ಘಟನೆಯಿಂದ ಜೀವತೆತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಮಟ್ಟದ ವೀರಶೈವ ಕ್ರೀಡಾಕೂಟ ಆಯೋಜಿಸಬೇಕಾಗಿದ್ದು, ಕೊಡಗಿನ ಇಂದಿನ ಪರಿಸ್ಥಿತಿಯಿಂದಾಗಿ ಕ್ರೀಡಾಕೂಟ ನಡೆಸದಿರಲು ತೀರ್ಮಾನಿಸಲಾಯಿತು. ಆದರೆ, ರಾಜ್ಯ ವೀರಶೈವ ಮಹಾಸಭಾದಿಂದ ಆಯ್ಕೆಯಾಗಿರುವ ಶೇ. 90 ಕ್ಕಿಂತ ಅಧಿಕ ಅಂಕಗಳಸಿದ ಎಸ್‍ಎಸ್‍ಎಲ್‍ಸಿಯ 5 ಮಂದಿ ಪಿ.ಯು.ಸಿ.ಯ 6 ಮಂದಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮ ಆಯೋಜಿಸಿ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಯಿತು. ಆದರೆ 2017-18ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿ.ಯು.ಸಿ.ಯ ವೀರಶೈವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು.