ಶನಿವಾರಸಂತೆ, ಅ. 4: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾರತೀಯ ಯೋಧರಿಗೆ ಗೌರವ ಸೂಚಕವಾಗಿ ಆಯೋಜಿಸಿದ್ದ ‘ಸರ್ಜಿಕಲ್ ಸ್ಟ್ರೈಕ್ ಡೇ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾರತೀಯ ಯೋಧರಿಗೆ ಪತ್ರ ಬರೆಯುವ ಮೂಲಕ ಶುಭ ಸಂದೇಶ ರವಾನಿಸಿದರು.

ಶಸ್ತ್ರ ಚಿಕಿತ್ಸೆಯಂತಹ ನಾಜೂಕಾದ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಭಯೋತ್ಪಾದನೆಯನ್ನು ಹತ್ತಿಕ್ಕಿ ದೇಶವನ್ನು ರಕ್ಷಣೆ ಮಾಡುತ್ತಿರುವ ಭಾರತೀಯ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ‘ಸರ್ಜಿಕಲ್ ಸ್ಟ್ರೈಕ್ ಡೇ’ಯನ್ನಾಗಿ ಶಾಲೆಗಳಲ್ಲಿ ಆಚರಿಸಲಾಯಿತು.

ಈ ಸಂದರ್ಭ ಸಹ ಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿ, ಪ್ರಾಣದ ಹಂಗನ್ನು ತೊರೆದು ಹಗಲಿರುಳು ದೇಶದ ರಕ್ಷಣೆ ಮಾಡುತ್ತಿರುವ ಭಾರತೀಯ ಯೋಧರನ್ನು ಗೌರವಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಕೇವಲ ಬಾಧಿತ ಭಾಗವನ್ನು ಮಾತ್ರ ಗುರಿಯಾಗಿಸಿಕೊಂಡು ಸೂಕ್ಷ್ಮವಾಗಿ ಗಮನಿಸಿ ರೋಗಿಯನ್ನು ಗುಣಮುಖ ಗೊಳಿಸುವ ದೃಷ್ಟಿಯನ್ನು ಹೊಂದಿರುತ್ತಾರೆ. ಹಾಗೆಯೇ ದೇಶದ ಸೈನಿಕರು ಶತ್ರುಗಳು ಬಾಧಿತ ಪ್ರದೇಶವನ್ನು ಮಾತ್ರ ಗುರಿಯಾಗಿಸಿಕೊಂಡು ಇಡೀ ದೇಶವನ್ನು ವಿದ್ವಂಸಕ ಕೃತ್ಯಗಳಿಂದ ರಕ್ಷಿಸುತ್ತಾರೆ. ಅಂತಹ ಸೈನಿಕರಿಗಾಗಿ ಕಾರ್ಯಕ್ರಮ ಆಯೋಜಿಸಿ ಶಾಲಾ ಮಕ್ಕಳಿಂದ ಪತ್ರ ಬರೆಸುವದು ಮತ್ತು ಶುಭ ಸಂದೇಶ ಕಳುಹಿಸುವ ಮೂಲಕ ಬೆಂಬಲ ನೀಡಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆಯಲ್ಲಿ ಪತ್ರ ಬರೆದು ಶುಭಾಶಯ ತಿಳಿಸಿ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಶಿಕ್ಷಕ ಮಂಜುನಾಥ್ ಹಾಜರಿದ್ದರು.