ಕೂಡಿಗೆ, ಅ.4 : ಕರ್ನಾಟಕ ಪಂಚಾಯತ್ ರಾಜ್ ವತಿಯಿಂದ ಜಿಲ್ಲೆಯ ಮೂರು ತಾಲೂಕುಗಳ ಒಂದು ಗ್ರಾಮ ಪಂಚಾಯ್ತಿಗೆ ಪ್ರತಿವರ್ಷ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, 2017-18ನೇ ಸಾಲಿನಲ್ಲಿ ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ, ಮಡಿಕೇರಿಯ ಭಾಗಮಂಡಲ ಹಾಗೂ ವೀರಾಜಪೇಟೆಯ ಪಾಲಿಬೆಟ್ಟ ಪಂಚಾಯ್ತಿಗಳು ಪಡೆದುಕೊಂಡವು.

ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರಿನ ವಿಧಾನಸೌದದ ಬಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ, ಶಾಸಕ ರೋಶನ್ ಬೇಗ್ ಅವರಿಂದ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಗುಂಡ ಭೀಮ ಸೇನಾ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ಹಾಗೂ ಅಭಿವೃದ್ಧಿ ಅಧಿಕಾರಿ ರಾಕೇಶ್ ಅವರು 5 ಲಕ್ಷ ರೂ ನಗದಿನ ಚೆಕ್ ಒಳಗೊಂಡಂತೆ ಗಾಂಧಿ ಗ್ರಾಮ ಪ್ರಶಸ್ತಿಯನ್ನು ಸ್ವೀಕರಿಸಿದರು.

ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಪಿಡಿಓ ಎ.ಎ. ಅಬ್ದುಲ್ಲ ಹಾಗೂ ಮಡಿಕೇರಿ ತಾಲೂಕಿನ ಭಾಗಮಂಡಲ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಜಗದೀಶ್, ಪಿಡಿಓ ಸುಮಿತ್ರಾ ಅವರುಗಳು ಇದೇ ಸಂದರ್ಭದಲ್ಲಿ ಗಾಂಧಿ ಗ್ರಾಮ ಪ್ರಶಸ್ತಿಯನ್ನು ಸ್ವೀಕರಿಸಿದರು.

ಮಡಿಕೇರಿ: ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಗಾಂಧಿ ಜಯಂತಿ ಸಮಾರಂಭದಲ್ಲಿ ಪಾಲಿಬೆಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಹಾಗೂ ಪಿಡಿಒ ಎ.ಎ. ಅಬ್ದುಲ್ಲ 3ನೇ ಬಾರಿಗೆ ಪಂಚಾಯಿತಿಗೆ ದೊರೆತ ಗಾಂಧೀಗ್ರಾಮ ಪುರಸ್ಕಾರ ಪಡೆದುಕೊಂಡರು.

ಪ್ರಶಸ್ತಿ ಹಣ ರೂ. 5 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಬಗ್ಗೆ ಗ್ರಾಮ ಪಂಚಾಯತಿ ಒಪ್ಪಿಗೆ ಪತ್ರವನ್ನು ಮುಖ್ಯಮಂತ್ರಿಗೆ ನೀಡಿದರು. ಈ ಸಂದರ್ಭ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಖ್, ಪಂಚಾಯತ್ ರಾಜ್ ಕಾರ್ಯದರ್ಶಿ ವಿ. ಸಾವಿತ್ರಿ, ಮುಂತಾದವರಿದ್ದರು.