ಮಡಿಕೇರಿ, ಅ. 3: ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಂಡಿರುವ ಪ್ರೊ ಕಬಡ್ಡಿ ಪಂದ್ಯಾವಳಿಯ ಮಾದರಿಯಲ್ಲಿ ಮುಂದಿನ ವರ್ಷ ಪ್ರೊ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಈ ಕುರಿತು ಆಸಕ್ತಿ ಇರುವ ಕೆಲವರು ಸೇರಿ ಈ ಪ್ರಯತ್ನಕ್ಕೆ ಮುಂದಾಗಿರುವದಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಥ್ರೋಬಾಲ್ ಕ್ರೀಡೆಯಲ್ಲಿ ಪ್ರತಿನಿಧಿಸಿರುವ ಜಿಲ್ಲೆಯ ನಾಪೋಕ್ಲುವಿನವರಾದ ಆಟಗಾರ್ತಿ ಬೊಪ್ಪಂಡ ರೀಮಾ ಅಪ್ಪಚ್ಚು ಅವರು ತಿಳಿಸಿದರು.

ಇತ್ತೀಚೆಗೆ ಬ್ಯಾಂಕಾಕ್‍ನಲ್ಲಿ ನಡೆದ ಭಾರತ ಹಾಗೂ ಮಲೇಷಿಯಾ ರಾಷ್ಟ್ರಗಳ ನಡುವಿನ ಪಂದ್ಯಾವಳಿಯಲ್ಲಿ 2-1ರಿಂದ ಸರಣಿ ಜಯಗಳಿಸಿರುವ ಭಾರತ ತಂಡದ ಆಟಗಾರ್ತಿ ರೀಮಾ ಅಪ್ಪಚ್ಚು ಅವರು ಇಂದು ‘ಶಕ್ತಿ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭ ಈ ಕ್ರೀಡೆಯ ಕುರಿತು ಪತ್ರಿಕೆಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಾವು ಸೇರಿದಂತೆ ತಂಡದ ನಾಯಕಿ ಸಂಪೂರ್ಣ, ತರಬೇತುದಾರರಾದ ಹಾಕಿಬ್ ಅವರುಗಳು ಈ ಚಿಂತನೆ ನಡೆಸಿದ್ದು, ಪ್ರಮೋಟರ್ಸ್ ಅನ್ನು ಸಂಪರ್ಕಿಸಲಾಗುತ್ತಿದೆ. ಈ ಪ್ರಯತ್ನ ಸಫಲವಾದಲ್ಲಿ ಬೆಂಗಳೂರಿನಲ್ಲಿ ಈ ಪಂದ್ಯಾವಳಿ ಆಯೋಜಿಸಲಿರುವದಾಗಿ ಅವರು ತಿಳಿಸಿದರು. ಥ್ರೋಬಾಲ್ ಕ್ರೀಡೆಯನ್ನು ಪುರುಷರು ಹಾಗೂ ಮಹಿಳಾ ತಂಡದವರು ಆಡುತ್ತಾರೆ. ಆದರೆ ಈ ಕ್ರೀಡೆ ಇನ್ನೂ ಏಷ್ಯನ್ ಗೇಮ್ಸ್, ಕಾಮನ್‍ವೆಲ್ತ್, ಒಲಿಂಪಿಕ್ಸ್ ನಂತಹ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಸೇರ್ಪಡೆಗೊಂಡಿಲ್ಲ. ಕೇವಲ ಐದು ವರ್ಷದ ಹಿಂದೆಯಷ್ಟೆ ಸೆಪೆಕ್ (Seಠಿಚಿಞ) ಎಂಬ ಕ್ರೀಡೆ ಆವಿಷ್ಕಾರಗೊಂಡು ಏಷ್ಯನ್ ಗೇಮ್ಸ್‍ನಂತಹ ಕ್ರೀಡೆಗೆ ಸೇರ್ಪಡೆಗೊಂಡಿದೆ. ಈ ನಿಟ್ಟಿನಲ್ಲಿ ಥ್ರೋಬಾಲ್ ಕೂಡ ಸೇರ್ಪಡೆಗೊಳ್ಳ ಬೇಕೆಂಬದು ತಮ್ಮ ಅಭಿಲಾಷೆಯಾಗಿದೆ ಎಂದು ಅವರು ಹೇಳಿದರು.

ಪ್ರೊ ಕಬಡ್ಡಿ ಬಳಿಕ ಹಲವಾರು ಯುವ ಪ್ರತಿಭೆಗಳಿಗೆ ಉದ್ಯೋಗ ಅವಕಾಶಗಳು, ಆರ್ಥಿಕ ಅವಕಾಶಗಳು ಹೆಚ್ಚಾಗಿವೆ. ಇದರಂತೆ ಥ್ರೋಬಾಲ್ ಅನ್ನು ಜನಪ್ರಿಯಗೊಳಿಸಿದರೆ ಯುವ ಪ್ರತಿಭೆಗಳಿಗೆ ಉತ್ತೇಜನ ದೊರೆತಂತಾಗುತ್ತದೆ ಎಂದ ಅವರು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವದರಿಂದ ಯುವ ಜನಾಂಗದವರು ದಾರಿತಪ್ಪದೆ ಕ್ರಿಯಾಶೀಲರಾಗಿರುತ್ತಾರೆಂದು ಅನಿಸಿಕೆ ವ್ಯಕ್ತಪಡಿಸಿದರು.

ಥ್ರೋಬಾಲ್ ಕ್ರೀಡೆಯಲ್ಲಿ ಕೊಡಗಿನವರಾದ ತಷ್ಮಾ ಮುತ್ತಪ್ಪ ಸೇರಿದಂತೆ ಹಲವಾರು ಪ್ರತಿಭೆಗಳಿವೆ. ಆದರೆ ಅವಕಾಶದ ಕೊರತೆಯಿಂದ ಕೆಲವರು ಈ ಕ್ರೀಡೆಯನ್ನು ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿರುವದು ಕಂಡುಬರುತ್ತಿದೆ ಎಂದ ರೀಮಾ ಪ್ರೊ ಥ್ರೋಬಾಲ್ ಆಯೋಜನೆಯಾದಲ್ಲಿ ಇದು ಇನ್ನಷ್ಟು ಜನಪ್ರಿಯವಾಗುವ ದರೊಂದಿಗೆ ಅವಕಾಶಗಳು ಹೆಚ್ಚಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. -ಶಶಿ