ಸೋಮವಾರಪೇಟೆ, ಅ. 3: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪಡಿತರ ಚೀಟಿ ವಿತರಿಸಲು ಅಧಿಕಾರಿಗಳು ವಿಳಂಬ ಧೋರಣೆ ತಾಳುತ್ತಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು, ಆಹಾರ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಪಡಿತರ ಚೀಟಿ ವಿತರಣೆಗೆ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ನಾವುಗಳು ದಿನಂಪ್ರತಿ ಕಚೇರಿಗೆ ಅಲೆಯುತ್ತಿದ್ದೇವೆ. ಪಡಿತರ ಚೀಟಿಗಾಗಿ ಕಳೆದ ಏಳೆಂಟು ತಿಂಗಳಿ ನಿಂದ ಬರುತ್ತಿದ್ದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ತಾಲೂಕು ಕಚೇರಿಯಲ್ಲಿರುವ ಆಹಾರ ಇಲಾಖಾ ಕಛೇರಿಯಲ್ಲಿ ಕಂಪ್ಯೂಟರ್, ಪ್ರಿಂಟರ್‍ಗಳು ಸರಿಯಿಲ್ಲ ಎಂದು ಗ್ರಾಹಕರನ್ನು ಖಾಸಗಿ ಕಂಪ್ಯೂ ಟರ್ ಸೆಂಟರ್‍ಗೆ ಕಳುಹಿಸುತ್ತಿದ್ದಾರೆ. ಅಲ್ಲಿ ಗ್ರಾಹಕರಿಂದ ಹೆಚ್ಚಿಗೆ ಹಣ ವಸೂಲಿ ಮಾಡಲಾಗುತ್ತಿದೆ. ಇದ ರೊಂದಿಗೆ ಬೆಳಗಿನಿಂದ ಸಂಜೆಯ ವರೆಗೂ ನಿಂತುಕೊಳ್ಳಬೇಕಿದೆ. ಆದರೂ ಪಡಿತರ ಚೀಟಿ ಮಾತ್ರ ಲಭಿಸುತ್ತಿಲ್ಲ ಕಿಶೋರ್, ರಾಜಶೇಖರ್, ಸಾವಿತ್ರಿ, ಸಂಪತ್ ಸೇರಿದಂತೆ ಇತರರು ಆರೋಪಿಸಿದರು.

ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸದಾಶಿವಯ್ಯ ಅವ ರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದ ಸಾರ್ವಜನಿಕರು, ಸ್ಥಳೀಯ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದರು.

ಪಡಿತರ ಚೀಟಿ ವಿತರಣೆಗೆ ಸಂಬಂಧಿಸಿದಂತೆ ಕಚೇರಿಯಲ್ಲಿರುವ ಕಂಪ್ಯೂಟರ್ ಹಾಗು ಪ್ರಿಂಟರ್‍ಗಳು ದುರಸ್ತಿಗೀಡಾಗಿ ಹಲವು ದಿನಗಳಾಗಿವೆ. ಆದರೆ ಅವುಗಳನ್ನು ಸರಿಪಡಿಸಲು ಇಂದಿಗೂ ಕ್ರಮ ಕೈಗೊಂಡಿಲ್ಲ. ಇದನ್ನೇ ನೆಪವಾಗಿಟ್ಟು ಕೊಂಡು ಖಾಸಗಿ ಕಂಪ್ಯೂಟರ್ ಸೆಂಟರ್‍ಗೆ ಗ್ರಾಹಕರನ್ನು ಕಳುಹಿಸು ತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ತಹಶೀಲ್ದಾರ್ ಜತೆ ಮಾತುಕತೆ ನಡೆಸಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳೊಳಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.