ಕೂಡಿಗೆ, ಅ. 3: ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಮಧುಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2017-18ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿ, ಅಂದಾಜು ಮುಂಗಡ ಪತ್ರವನ್ನು ಮಂಜೂರು ಮಾಡಲಾಯಿತು. ಸಂಘದ ಕಾರ್ಯದರ್ಶಿ ಶ್ರೀನಿವಾಸ್ ವರದಿ ವಾಚಿಸಿದರು.
ಸಂಘದ ಅಧ್ಯಕ್ಷ ಮಧುಕುಮಾರ್ ಮಾತನಾಡಿ, 2017-18ನೇ ಸಾಲಿನಲ್ಲಿ ಸದಸ್ಯರ ಸಹಕಾರದೊಂದಿಗೆ ಸಂಘಕ್ಕೆ ರೂ. 5 ಲಕ್ಷ ಲಾಭಾಂಶ ಬಂದಿದೆ. ಲಾಭಾಂಶವನ್ನು ಸಂಘದ ವಿವಿಧ ಯೋಜನೆಗಳಿಗೆ ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದರು.
ಸಂಘದ ಉಪಾಧ್ಯಕ್ಷ ಎಂ.ಎಂ. ಪ್ರಕಾಶ್ ಮಾತನಾಡಿ, ಈ ಸಾಲಿನಲ್ಲಿ ಸಂಘಕ್ಕೆ ಶಾಶ್ವತ ಕಟ್ಟಡ ನಿರ್ಮಾಣ ಮಾಡುವದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಹಾಸನ ಹಾಲು ಒಕ್ಕೂಟದಿಂದ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕರಿಸುವದಾಗಿ ಭರವಸೆ ನೀಡಿದ್ದು, ಕಟ್ಟಡ ನಿರ್ಮಾಣ ಮಾಡಲು ಎಲ್ಲರು ಸಹಕಾರ ನೀಡಬೇಕು ಎಂದರು.
ಈ ಗ್ರಾಮಕ್ಕೆ ಪಶು ಚಿಕಿತ್ಸಾ ಕೇಂದ್ರ ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವರಿಗೂ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪತ್ರ ವ್ಯವಹರಿಸುವ ಬಗ್ಗೆ ಮಾಹಿತಿ ನೀಡಿದರು. ಸಂಘದ ವತಿಯಿಂದ ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಹೆಚ್.ಎ. ಪ್ರಕಾಶ್ ಮಾಹಿತಿ ನೀಡಿದರು.
ಸಂಘದ ಸದಸ್ಯರ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಿದರು. ಸಭೆಯಲ್ಲಿ ನಿರ್ದೇಶಕರಾದ ಪ್ರದೀಪ್, ಅಪ್ಪಣ್ಣ, ಎಂ.ಎಸ್. ಪ್ರಸನ್ನ, ದೇವಯ್ಯ, ಮಂಜುನಾಥ್, ಉಷಾ, ಕಮಲಮ್ಮ ಹಾಗೂ ಸದಸ್ಯರು ಇದ್ದರು.