ಸೋಮವಾರಪೇಟೆ, ಸೆ. 30: ಗ್ರಾಮೀಣ ಪ್ರದೇಶದ ಜಾನಪದ ಕಲಾಪ್ರಕಾರಗಳು, ಜಾನಪದೀಯ ನೃತ್ಯಗಳು, ಜಾನಪದ ಗೀತೆಗಳು ಸೇರಿದಂತೆ ಹತ್ತು ಹಲವು ಕಲಾಪ್ರಕಾರಗಳಿಗೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.
ಇಲ್ಲಿನ ಓಎಲ್ವಿ ಕಾನ್ವೆಂಟ್ನಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಾ ಅಭಿಯಾನಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಶ್ರದ್ಧೆಯಿಟ್ಟು ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಇದು ಮಕ್ಕಳ ಸರ್ವತೋಮುಖ ವಿಕಾಸಕ್ಕೆ ನಾಂದಿಯಾಗಲಿದೆ ಎಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಓಎಲ್ವಿ ಕಾನ್ವೆಂಟ್ನ ಮುಖ್ಯೋಪಾಧ್ಯಾಯಿನಿ ಮಮತ, ಪ್ರೌಢಶಾಲಾ ವಿಭಾಗದ ಸೆರಿನ್ ಮತ್ತಿತರರು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಪ್ರಾಸ್ತಾವಿಕ ನುಡಿಯಾಡಿದರು. ನಂತರ 1 ರಿಂದ 7ನೇ ತರಗತಿ ಮಕ್ಕಳಿಗೆ ವೈಯಕ್ತಿಕ ಮತ್ತು ಸಾಮೂಹಿಕ ಸ್ಪರ್ಧೆಗಳು ಜರುಗಿದವು.