ನಾಪೆÇೀಕ್ಲು, ಅ. 2: ಸ್ವಚ್ಛತೆ ಮನಸ್ಸಿ ನೊಳಗಿನಿಂದ ಹೊರಹೊಮ್ಮಬೇಕು. ನಾವು ಸ್ವಚ್ಛವಾದ ವಾತಾವರಣದಲ್ಲಿ ಇರಲು ಯತ್ನಿಸಬೇಕು. ಸ್ವಚ್ಛ ಭಾರತದ ಅರ್ಥ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವದು ಆಗಿದೆ. ಶೌಚಾಲಯಗಳು ಮಹಿಳೆಯರ ಆತ್ಮ ಗೌರವದ ಸಂಕೇತಗಳು ಎಂದು ಕೊಡಗು - ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹೇಳಿದರು.
ಸಮೀಪದ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ಬಲ್ಲಮಾವಟಿ ಗ್ರಾ.ಪಂ., ನೇತಾಜಿ ವಿದ್ಯಾಸಂಸ್ಥೆ ಮತ್ತು ನಾಪೆÇೀಕ್ಲು ಲಯನ್ಸ್ ಕ್ಲಬ್‍ನ ಸಂಯುಕ್ತಾಶ್ರಯದಲ್ಲಿ ಕಳೆದ ನಾಲ್ಕು ದಿನಗಳಿಂದ ಬಲ್ಲಮಾವಟಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಸಲಾದ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ಸ್ವಾತಂತ್ರ್ಯವನ್ನು ಭಾರತಕ್ಕೆ ನೀಡಿದ್ದಾರೆ. ಅವರಿಗೆ ಸ್ವಚ್ಛ ಭಾರತವನ್ನು ನೀಡುವ ಮೂಲಕ ಗೌರವ ಸಲ್ಲಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ. ಅದಕ್ಕಾಗಿ ಎಲ್ಲರೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ನಮ್ಮ ದೇಶದಲ್ಲಿ ಪೌರ ಪ್ರಜೆಯ ಕೊರತೆ ಇದೆ. ಇದು ನಮಗೂ ವಿದೇಶಿಯರಿಗೂ ಇರುವ ವ್ಯತ್ಯಾಸ. ಶಾಲೆಗಳಲ್ಲಿ ವಾರಕ್ಕೆ ಒಂದು ದಿನದಂತೆ ಸ್ವಚ್ಛತೆ ಮತ್ತಿತರ ಕೆಲಸಗಳನ್ನು ಮಾಡಿಸಬೇಕು. ಅದರ ಬಗ್ಗೆ ಅವರಿಗೆ ಅರಿವು ಮೂಡಿದರೆ ಮಾತ್ರ ಅವರಲ್ಲೂ ಸ್ವಾವಲಂಬನೆ ಮೂಡಲು ಸಾಧ್ಯ ಎಂದರು.
ಬೆಂಗಳೂರು - ಮೈಸೂರು ರಸ್ತೆ ಕಾಮಗಾರಿ ಆರಂಭವಾಗಿ ಮುಂದಿನ ದಿನಗಳಲ್ಲಿ ಮೈಸೂರು - ಮಡಿಕೇರಿ, ಮಡಿಕೇರಿ - ಕಾಂಞಂಗಾಡ್ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಗಾಂಧೀಜಿ ಕಂಡ ಸ್ವಚ್ಛ ಭಾರತ ಕನಸನ್ನು ನನಸು ಮಾಡುವದು ನಮ್ಮೆಲ್ಲರ ಜವಾಬ್ದಾರಿ. ಜಾಗೃತ ಸಮಾಜ ನಿರ್ಮಾಣವಾಗಬೇಕಾದರೆ ಮನಸ್ಸು, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಬೇಕು. ಪ್ಲಾಸ್ಟಿಕ್ ಮುಕ್ತ ಸಮಾಜ ನಮ್ಮ ಧ್ಯೇಯವಾಗಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಮಾತನಾಡಿ ವಿದೇಶಿಯರು ನಮ್ಮ ದೇಶದ ಸಂಸ್ಕøತಿ, ತತ್ವವನ್ನು ಪಾಲಿಸುತ್ತಿದ್ದಾರೆ. ನಾವು ಅದನ್ನು ಮರೆಯುತ್ತಿದ್ದೇವೆ. ಇದಕ್ಕೆ ನಮ್ಮ ಪ್ರಾಥಮಿಕ ಶಿಕ್ಷಣ ಕುಸಿಯುತ್ತಿರುವದೇ ಕಾರಣ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಗಾಂಧೀ ಜಯಂತಿ ಕಾರ್ಯಕ್ರಮ ಒಂದು ದಿನ ಪೆÇರಕೆ ಹಿಡಿದು ಗುಡಿಸಲು ಸೀಮಿತವಾಗಬಾರದು. ಅದು ಎಲ್ಲರ ಮನೆ ಮನೆಯಿಂದ ಆರಂಭಗೊಳ್ಳಬೇಕು. ಆಗ ಮಾತ್ರ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಮಾಜಿ ಸದಸ್ಯ ನೆರವಂಡ ಉಮೇಶ್, ಬಲ್ಲಮಾವಟಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೀಣಾ ಕುಮಾರಿ, ನೇತಾಜಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಕಾವೇರಿ, ಬಲ್ಲಮಾವಟಿ ಗ್ರಾ.ಪಂ.ನ ಎಲ್ಲಾ ಸದಸ್ಯರು, ನೇತಾಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಲಯನ್ಸ್ ಕ್ಲಬ್‍ನ ಎಲ್ಲಾ ಪದಾಧಿಕಾರಿ ಗಳು ಇದ್ದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ನೇತಾಜಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಕುಮಾರಸ್ವಾಮಿ, ಶಿಕ್ಷಕ ಸಿ.ಎಸ್.ಸುರೇಶ್ ನಿರೂಪಿಸಿ, ಗ್ರಾ.ಪಂ. ಸದಸ್ಯ ಚಂಗೇಟಿರ ಕುಮಾರ್ ಸೋಮಣ್ಣ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ನಾಪೋಕ್ಲು ಭಾಗಮಂಡಲ ಮುಖ್ಯ ರಸ್ತೆಯ ದೊಡ್ಡಪುಲಿಕೋಟು ಹಾಗೂ ಚೋನಕೆರೆ, ಕಕ್ಕಬ್ಬೆ - ನೆಲಜಿ ಸಂಪರ್ಕ ರಸ್ತೆಯ ಬಟ್ಟಿತಡಿ ಹಾಗೂ ಪೇರೂರು ಗ್ರಾಮದ ಇಗ್ಗುತ್ತಪ್ಪ ದೇವಾಲಯದ ಪ್ರವೇಶದ್ವಾರದ ಬಳಿಯಿಂದ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯವರೆಗೆ ಸ್ವಚ್ಛತಾ ಆಂದೋಲನ ಜಾಗೃತಿ ಜಾಥಾ ನಡೆಯಿತು. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಬಸ್ಸು ತಂಗುದಾಣಗಳಿಗೆ ಬಣ್ಣ ಬಳಿದು ಸ್ವಚ್ಛಗೊಳಿಸಲಾಗಿತ್ತು. ಕಾರ್ಯಕ್ರಮದ ನಂತರ ತ್ಯಾಜ್ಯ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷತೆ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು.