ಮಡಿಕೇರಿ, ಅ. 2: ಕಳೆದ ಏಪ್ರಿಲ್ನಲ್ಲಿ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಮಾವ ಐದು ತಿಂಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಏಪ್ರಿಲ್ 22 ರಂದು ರಾತ್ರಿ ಮದೆ ಗ್ರಾಮದ ನಿವಾಸಿ ಉಗ್ರಾಣಿ ಚಂಗಪ್ಪ ಎಂಬ ಮಾಜೀ ಯೋಧ, ತನ್ನ ಸೊಸೆ ಸರಿತಾ ಎಂಬಾಕೆ ಮೇಲೆ ಕ್ಷುಲ್ಲಕ ಕಾರಣಕ್ಕೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಈ ವೇಳೆ ಸ್ನಾನ ಮಾಡುತ್ತಿದ್ದ ಮಗ ಶ್ಯಾಂಸುಂದರ್ ಧಾವಿಸಿ ತಂದೆಯ ಬಳಿ ಕೋವಿಯನ್ನು ಕಸಿದುಕೊಂಡಿದ್ದಾರೆ.
ಈ ಸಂದರ್ಭ ಗಾಯಗೊಂಡಿದ್ದ ಸೊಸೆ ಹಾಗೂ ಕೋವಿಯನ್ನು ಎಳೆದಾಡುವಾಗ ಬಿದ್ದು ಘಾಸಿಗೊಂಡಿದ್ದ ಚಂಗಪ್ಪ ಕೂಡ ಆಸ್ಪತ್ರೆಗೆ ದಾಖಲಾಗುವದರೊಂದಿಗೆ, ಬಳಿಕ ಪ್ರಕರಣ ಸಂಬಂಧ ಆರೋಪಿ ಜೈಲು ಸೇರಿದ್ದ. ಕೆಲವು ಸಮಯದ ಹಿಂದೆ ಜಾಮೀನಿನಲ್ಲಿ ಹೊರ ಬಂದಿದ್ದ ಚಂಗಪ್ಪ ನಗರದ ಹಳೆಯ ಆರ್ಟಿಓ ಕಚೇರಿ ಬಳಿಯ ಹೊಟೇಲ್ವೊಂದರಲ್ಲಿ ಬಾಡಿಗೆಗೆ ಕೋಣೆ ಪಡೆದು ತಂಗುತ್ತಿದ್ದುದಾಗಿ ತಿಳಿದು ಬಂದಿದೆ.
ಮೊನ್ನೆ ರಾತ್ರಿ ತನ್ನ ಮಗ ಹಾಗೂ ಸೊಸೆಯಿಂದ ಜೀವ ಭಯ ಇರುವದಾಗಿ ಚೀಟಿ ಬರೆದಿಟ್ಟು ಮದ್ಯದೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವದು ಬೆಳಕಿಗೆ ಬಂದಿದೆ. ಆತನ ಸಾವಿಗೆ ಸಂಬಂಧಿಸಿದಂತೆ ಮಗ ಹಾಗೂ ಸೊಸೆ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾಯ್ದೆ 306ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯಲಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್ ಸುಳಿವು ನೀಡಿದ್ದಾರೆ.