ಕೂಡಿಗೆ, ಅ. 2 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮಕ್ಕೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಯಾವದೇ ರೀತಿಯ ಕ್ರಿಯಾಯೋಜನೆ ಸೇರ್ಪಡೆ ಗೊಳಿಸಿಲ್ಲ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂಬ ವಿಚಾರದ ವಿರುದ್ಧ ಕೂಡಿಗೆ ಗ್ರಾ.ಪಂ. ಎದುರು ಬ್ಯಾಡಗೊಟ್ಟ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜನಾಂಗದ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ ಅವರ ನೇತೃತ್ವದಲ್ಲಿ ನೂರಾರು ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕೂಡಿಗೆ ಕೊಪ್ಪಲಿನಿಂದ ಮೆರವಣಿಗೆಯಲ್ಲಿ ಗ್ರಾ.ಪಂ. ವಿರುದ್ಧ ಘೋಷಣಾ ಫಲಕಗಳನ್ನು ಹಿಡಿದು ದಿಕ್ಕಾರ ಕೂಗುತ್ತಾ, ಕೂಡಿಗೆ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.
ಬ್ಯಾಡಗೊಟ್ಟ ಗ್ರಾಮದವರೇ ಆದ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ ಅವರು ಮಾತನಾಡಿ, ಸಮುದಾಯ ಭವನ ನಿರ್ಮಾಣ ಮಾಡುವ ಭರವಸೆ ನೀಡಿ, ಇದುವರೆಗೂ ಯಾವದೇ ರೀತಿಯ ಕ್ರಮಕೈಗೊಂಡಿಲ್ಲ. ಬ್ಯಾಡಗೊಟ್ಟ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 1 ಕೋಟಿ ಹಣ ಮಂಜೂರಾಗಿದ್ದು, ಈ ಹಣವನ್ನು ಎಲ್ಲಾ ವಾರ್ಡ್ಗಳಿಗೆ ಮನಬಂದಂತೆ ಹಂಚಿಕೆ ಮಾಡಿ ಕೊಂಡಿದ್ದು, ಬ್ಯಾಡಗೊಟ್ಟ ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ. ಅಲ್ಲದೆ, ಕಸ ವಿಲೇವಾರಿ ಘಟಕವನ್ನು ಬ್ಯಾಡಗೊಟ್ಟ ಗ್ರಾಮದಲ್ಲೇ ತೆರೆಯಲು ಕ್ರಿಯಾಯೋಜನೆ ರೂಪಿಸಿದ್ದಾರೆ. ಅಲ್ಲದೆ, ಮೂಲಭೂತ ವ್ಯವಸ್ಥೆಗಳಾದ ಚರಂಡಿ ವ್ಯವಸ್ಥೆ, ಬೀದಿ ದೀಪಗಳ ಅಭಿವೃದ್ಧಿ ಪಡಿಸಬೇಕು ಎಂಬ ಬ್ಯಾಡಗೊಟ್ಟ ಗ್ರಾಮಸ್ಥರ ಮನವಿಗಳನ್ನು ಗ್ರಾ.ಪಂ.ಯು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ವೇದಿಕೆಯ ಉಪಾಧ್ಯಕ್ಷ ಗಣೇಶ್, ಬ್ಯಾಡಗೊಟ್ಟ ದಿಟ್ಟಳ್ಳಿ ನಿರಾಶ್ರಿತರ ಕೇಂದ್ರದ ಮುಖ್ಯಸ್ಥ ಮಲ್ಲಪ್ಪ, ಗಿರೀಶ್, ಗೋಪಿ, ಬ್ಯಾಡಗೊಟ್ಟ ಗ್ರಾಮದ ಮಹಿಳಾ ಸಂಘ ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರು, ಯುವಕ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ನಿರತರಾಗಿದ್ದರು.
ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರ ನೇತೃತ್ವದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್ಕುಮಾರ್ ಹಾಗೂ ಸದಸ್ಯರು ಪ್ರತಿಭಟನೆಯ ವಿಷಯಕ್ಕೆ ಸಂಬಂಧಿಸಿ ದಂತೆ ಸಭೆ ನಡೆಸಿ, ಈಗಾಗಲೇ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯ 1 ಕೋಟಿ ಅನುದಾನದ ಕಾಮಗಾರಿಗಳ ಕ್ರಿಯಾಯೋಜನೆ ಆಗಿದ್ದು, ಈ ಕ್ರಿಯಾಯೋಜನೆಯ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯುವ ಗ್ರಾಮ ಸಭೆಯಲ್ಲಿ ಬ್ಯಾಡಗೊಟ್ಟ ಗ್ರಾಮದ ಅಭಿವೃದ್ಧಿಗೆ ಕ್ರಿಯಾಯೋಜನೆ ಸೇರಿಸುವದು ಹಾಗೂ ಕಸ ವಿಲೇವಾರಿ ಘಟಕವನ್ನು ರದ್ದುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತಂದು ನಂತರ ಮುಂದಿನ ಕ್ರಮಕೈಗೊಳ್ಳ ಲಾಗುವದು ಎಂದು ಪ್ರತಿಭಟನಾಕಾರರಿಗೆ ಲಿಖಿತವಾಗಿ ನೀಡಿದ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ಕುಶಾಲನಗರ ವೃತ್ತನಿರೀಕ್ಷಕ ಕ್ಯಾತೇಗೌಡ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ಜಗದೀಶ್, ಸಹಾಯಕ ಠಾಣಾಧಿಕಾರಿ ಅಪ್ಪಾಜಿ ಹಾಗೂ ಸಿಬ್ಬಂದಿಗಳು ಯಾವದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಬಂದುಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.