ಗೋಣಿಕೊಪ್ಪಲು,ಅ.2: ಗೋಣಿ ಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇತಿಹಾಸದಲ್ಲಿಯೇ 2017-18ನೇ ಸಾಲಿನಲ್ಲಿ ಗುರಿಮೀರಿದ ಸಾಧನೆ ಮಾಡಿದೆ. ಆರ್ಥಿಕ ವರ್ಷದಲ್ಲಿ ಸುಮಾರು ರೂ. 1,87,00,000 ಮೊತ್ತದ ಸೆಸ್ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ, 2017-18 ನೇ ಸಾಲಿನಲ್ಲಿ ರೂ.2,10.03.807 ಕೋಟಿ ಮೊತ್ತ ಸಂಗ್ರಹಣೆ ಮೂಲಕ ಶೇ.112 ಸಾಧನೆ ಮಾಡಿ ದಾಖಲೆ ನಿರ್ಮಾಣ ಮಾಡಿದೆ. ಕಾಳುಮೆಣಸು ವಹಿವಾಟಿನಲ್ಲಿ ಸೆಸ್ ಮೂಲಕ ರೂ.1,81,17,423, ಭತ್ತ ರೂ.10,72,685, ಹಸಿ ಅಡಿಕೆ ರೂ.15,16,236 ಹಾಗೂ ಹಸಿ ಶುಂಠಿ ರೂ.1,95,987 ಹಾಗೂ ಇನ್ನಿತರೆ ಗೋದಾಮು ಬಾಡಿಗೆ ಇತ್ಯಾದಿ ಮೂಲಕ ಒಟ್ಟು 2017-18ನೇ ಸಾಲಿನಲ್ಲಿ ಸುಮಾರು ರೂ. 2,39,81,123 ಮೊತ್ತ ಆದಾಯ ರೂಪದಲ್ಲಿ ದಾಖಲೆ ಮಾಡಿರುವದಾಗಿ ಎಪಿಎಂಸಿ ಅಧ್ಯಕ್ಷ ಮಾಚಿಮಂಡ ಸುವಿನ್‍ಗಣಪತಿ ಮಾಹಿತಿ ನೀಡಿದರು.

ಗೋಣಿಕೊಪ್ಪಲಿನಲ್ಲಿ ಮಾಧ್ಯಮಕ್ಕೆ ವಿವರಣೆ ನೀಡಿದ ಅವರು, 2016-17 ರಲ್ಲಿ ಮಾರುಕಟ್ಟೆ ಶುಲ್ಕದ ಗುರಿ ರೂ.1,56,00,000 ನಿಗಧಿ ಮಾಡಲಾಗಿದ್ದು ರೂ.1,41,84,471 ಅಂದರೆ ಶೇ.91 ಸಾಧನೆ ಮಾಡ ಲಾಗಿತ್ತು ಎಂದರು. ಮುಂದಿನ ಸಾಲಿನಲ್ಲಿ ಅಂದರೆ 2018-19 ನೇ ಸಾಲಿನಲ್ಲಿ ಸೆಸ್ ಸಂಗ್ರಹದ ಗುರಿಯನ್ನು ರೂ.2,31,00,000 ಕ್ಕೆ ಏರಿಕೆ ಮಾಡಲಾಗಿದ್ದು ಏಪ್ರೀಲ್ ನಿಂದ ಆಗಸ್ಟ್ ವರೆಗೆ ಸುಮಾರು ರೂ.75 ಲಕ್ಷ ಸೆಸ್ ಸಂಗ್ರಹಿಸಲಾಗಿದೆ ಇಲ್ಲಿಯೂ ಈ ಬಾರಿ ಶೇ.104 ರಷ್ಟು ಗುರಿ ಸಾಧಿಸಲಾಗಿದೆ ಎಂದರು. 2018-19 ನೇ ಸಾಲಿನಲ್ಲಿ ಕಾಳುಮೆಣಸು ರೂ.76.34 ಲಕ್ಷ, ಭತ್ತ ರೂ.1.14 ಲಕ್ಷ, ಹಸಿ ಅಡಿಕೆ ರೂ. 5,535 ಹಾಗೂ ಹಸಿಶುಂಠಿ ರೂ.45,234 ಸಾವಿರದಷ್ಟು ಸೆಸ್ ಸಂಗ್ರಹಿಸಲಾಗಿದೆ.

ತಮ್ಮ ಅಧ್ಯಕ್ಷಾವಧಿಯ 20 ತಿಂಗಳು ಇದೇ ತಿಂಗಳು 9 ನೇ ತಾರೀಖಿಗೆ ಮುಕ್ತಾಯಗೊಳ್ಳಲಿದ್ದು, ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ತಮ್ಮ ಗುರಿ ಮೀರಿದ ಸಾಧನೆಗೆ ಉಪಾಧ್ಯಕ್ಷ ಕಳ್ಳಂಗಡ ಪಿ.ಬಾಲಕೃಷ್ಣ, ವರ್ತಕರ ಕ್ಷೇತ್ರದ ಗುಮ್ಮಟ್ಟಿರ ಕಿಲನ್ ಗಣಪತಿ, ಆಡಳಿತ ಮಂಡಳಿ ಸರ್ವ ಸದಸ್ಯರು, ಕಾರ್ಯದರ್ಶಿಗಳು, ಸಿಬ್ಬಂದಿ ವರ್ಗದ ಸಹಕಾರ ಕಾರಣವಾಗಿದೆ ಎಂದು ಹೇಳಿದ ಅವರು 2017-18 ರಲ್ಲಿ ರಾಜ್ಯ ಸಂಚಿತ ನಿಧಿಗೆ ಶೇ.15 ರಂತೆ ರೂ.17,75,879 ಮೊತ್ತವನ್ನು ಪಾವತಿಸಲಾಗಿದೆ. ರಾಜ್ಯ ಕೃಷಿ ಮಾರಾಟ ಮಂಡಳಿಗೆ ಶೇ.5 ರಂತೆ ರೂ.5,91,961, ಆವರ್ತ ನಿಧಿಗೆ ವಂತಿಗೆ ರೂಪದಲ್ಲಿ ರೂ.47,35,677 ಸಂದಾಯ ಮಾಡಲಾಗಿದೆ. ಎಪಿಎಂಸಿ ವ್ಯಾಪ್ತಿಗೆ ಸುಮಾರು 205 ವರ್ತಕರು ಒಳಪಟ್ಟಿದ್ದು, ಒಟ್ಟು 105 ಗೋದಾಮು/ ಅಂಗಡಿ ಮಳಿಗೆಗಳಲ್ಲಿ 89 ಹಂಚಿಕೆಯಾಗಿದೆ ಎಂದು ಹೇಳಿದರು.2018-19 ನೇ ಸಾಲಿಗೆ ಸುಮಾರು ರೂ.4 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿದ್ದು ತಾ.4 ರಂದು(ನಾಳೆ) ಶಂಕುಸ್ಥಾಪನಾ ಸಮಾರಂಭವನ್ನು ರಾಜ್ಯ ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕಾ ಸಚಿವ ಬಂಡೆಪ್ಪ ಕಾಶ್ಯಂಪುರ್ ನೆರವೇರಿಸಲಿರುವದಾಗಿ ತಿಳಿಸಿದರು.

ಶಂಕುಸ್ಥಾಪನಾ ಸಮಾರಂಭ

ನಬಾರ್ಡ್ ಮತ್ತು ಡಬ್ಲ್ಯು ಐ ಎಫ್ ಯೋಜನೆಯಡಿ ಗೋಣಿಕೊಪ್ಪಲು ಎಪಿಎಂಸಿ ವ್ಯಾಪ್ತಿಗೆ ಒಳಪಡುವ ಕಿರುಗೂರು, ಕಾನೂರು, ಅಮ್ಮತ್ತಿ, ಹುದಿಕೇರಿ, ಪಾಲಿಬೆಟ್ಟ, ಗೋಣಿಕೊಪ್ಪಲು ಗ್ರಾಮದಲ್ಲಿ 100 ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮು ನಿರ್ಮಾಣ ಹಾಗೂ ಗೋಣಿಕೊಪ್ಪಲು ಸಮಿತಿ ಆವರಣದಲ್ಲಿ 250 ಮೆ.ಟನ್ ಸಾಮಥ್ರ್ಯದ ಗೋದಾಮು ನಿರ್ಮಾಣ. ಕಾರ್ಮಾಡು ಗ್ರಾಮದಲ್ಲಿ ಅಂಗಡಿ ಮತ್ತು ಗೋದಾಮು, ಕಾವಾಡಿ ಗ್ರಾಮದ ಭಗವತಿ ದೇವಸ್ಥಾನದ ಸಮೀಪ ಕೃಷಿ ಕಣ ನಿರ್ಮಾಣವನ್ನು ಒಟ್ಟು ರೂ.2 ಕೋಟಿ ಯೋಜನಾ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವದು ಎಂದು ವಿವರಿಸಿದರು.

ನಬಾರ್ಡ್ ಮತ್ತು ಆರ್‍ಐಡಿ ಎಫ್-24 ಯೋಜನೆಯಲ್ಲಿ ಕಾಕೋಟುಪರಂಬು ಹಾಗೂ ಈಚೂರು ಗ್ರಾಮದಲ್ಲಿ ತಲಾ 100 ಮೆ.ಟನ್ ಸಾಮಥ್ರ್ಯದ ಗೋದಾಮು ನಿರ್ಮಾಣ, ಗೋಣಿಕೊಪ್ಪಲು ಸಮಿತಿಯ ಮುಖ್ಯ ಪ್ರಾಂಗಣದಲ್ಲಿ ಒಂದು ಗೋದಾಮು, ಮುಚ್ಚಿದ ಹರಾಜು ಕಟ್ಟೆ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ, ಕಾವಾಡಿ ಭದ್ರಕಾಳಿ ದೇವಸ್ಥಾನದ ಹತ್ತಿರ ಮುಚ್ಚಿದ ಮಾರುಕಟ್ಟೆ ಹರಾಜು ಕೇಂದ್ರವನ್ನು ಸುಮಾರು ರೂ.1 ಕೋಟಿ ವೆಚ್ಚದಲ್ಲಿ ನಿರ್ಮಿಸುವದು.

ಸಮಿತಿಯ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಸುಮಾರು ರೂ.8 ಲಕ್ಷ ವೆಚ್ಚದಲ್ಲಿ ಮುಖ್ಯ ಮಾರುಕಟ್ಟೆ ಒಳಬರುವ ಮತ್ತು ಹೊರಹೋಗುವ ಗೇಟುಗಳಿಗೆ ಪ್ರತ್ಯೇಕವಾಗಿ ಮತ್ತು ಕುಟ್ಟ, ಆನೆಚೌಕೂರು, ಮಾಲ್ಧಾರೆ,ಪೆರುಂಬಾಡಿ ಚೆಕ್‍ಪೆÇೀಸ್ಟ್ ಗಳಲ್ಲಿ ಒಟ್ಟು 6 ಸಂಖ್ಯೆಯಲ್ಲಿ ಮೇಕ್‍ಶಿಫ್ಟ್ ಅಭಿವೃದ್ಧಿ ಕಾಮಗಾರಿಗೆ ಕೆಲಸದ ಆದೇಶ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ತಾ. 4 ರಂದು ಗೋಣಿಕೊಪ್ಪಲು ಎಪಿಎಂಸಿ ಆವರಣ, ಕಾವಾಡಿ ಭಗವತಿ ದೇವಸ್ಥಾನ, ಎಪಿಸಿಎಂಎಸ್ ಅಮ್ಮತ್ತಿ, ಪಾಲಿಬೆಟ್ಟ ವಿಎಸ್‍ಎಸ್‍ಎನ್, ಗೋಣಿಕೊಪ್ಪಲು ಎಪಿಎಂಸಿ ಆವರಣದಲ್ಲಿ ಸಭೆ, ಆ ಬಳಿಕ ಕಿರುಗೂರು-ನಲ್ಲೂರು ವಿಎಸ್‍ಎಸ್‍ಎನ್. ಕಾನೂರು ವಿಎಸ್‍ಎಸ್‍ಎನ್. ಕಾಕೂರು-ಕುಟ್ಟ ಹಾಗೂ ಹುದಿಕೇರಿ ವಿಎಸ್‍ಎಸ್‍ಎನ್ ನಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕಾ ಸಚಿವ ಬಂಡೆಪ್ಪ ಕಾಶ್ಯಂಪುರ್ ಶಂಕುಸ್ಥಾಪನೆ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ.ಜಿ.ಬೋಪಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಅಧ್ಯಕ್ಷ ಬಿ.ಎಂ.ಹರೀಶ್, ತಾ.ಪಂ.ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಬೆಂಗಳೂರು ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಎಂ.ಬಿ.ರಾಜೇಶ್ ಗೌಡ, ಎಪಿಎಂಸಿ ಅಧ್ಯಕ್ಷ ಮಾಚಿಮಂಡ ಸುವಿನ್‍ಗಣಪತಿ ಹಾಗೂ ಉಪಾಧ್ಯಕ್ಷ ಕಳ್ಳಂಗಡ ವಿ.ಬಾಲಕೃಷ್ಣ ಭಾಗವಹಿಸಲಿದ್ದಾರೆ.