ಮಡಿಕೇರಿ, ಸೆ. 29: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯ ಅ. 2 ರಂದು ಬಲ್ಲಮಾವಟಿ ಗ್ರಾ.ಪಂ. ವತಿಯಿಂದ ಬೃಹತ್ ವಿಶೇಷ ಸ್ವಚ್ಛತಾ ಆಂದೋಲನ ನಡೆಯಲಿದೆ ಎಂದು ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮನು ಮುತ್ತಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಲ್ಲಮಾವಟಿ ಗ್ರಾಮ ಪಂಚಾಯಿತಿ, ನಾಪೋಕ್ಲು ಲಯನ್ಸ್ ಕ್ಲಬ್ ಮತ್ತು ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪಂಚಾಯಿತಿಯ ಬಲ್ಲಮಾವಟಿ, ನೆಲಜಿ, ಪೇರೂರು, ದೊಡ್ಡಪುಲಿ ಕೋಟು ಗ್ರಾಮಗಳ ಎಲ್ಲಾ ಸಂಘ-ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಸ್ವಸಹಾಯ, ಸ್ತ್ರೀಶಕ್ತಿ ಗುಂಪುಗಳನ್ನು ಒಳಗೊಂಡಂತೆ ಸ್ವಚ್ಛತಾ ಆಂದೋಲನವನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ವಚ್ಛತಾ ಆಂದೋಲನದಂದು ಬೆಳಿಗ್ಗೆ 9 ಗಂಟೆಗೆ ಬಲ್ಲಮಾವಟಿಯನ್ನು ಸಂಪರ್ಕಿಸುವ ನಾಪೋಕ್ಲು, ಕಕ್ಕಬೆ, ಭಾಗಮಂಡಲ ಮತ್ತು ಪೇರೂರು ಇಗ್ಗುತ್ತಪ್ಪ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯ ಬಳಿಯಿಂದ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳನ್ನು ಒಳಗೊಂಡಂತೆ ಜಾಥಾ ನಡೆಯಲಿದೆ. ಇದರ ಮೂಲಕ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸುವ ಕಾರ್ಯ ನಡೆಯಲಿದ್ದು, ಜಾಥಾ ಬಲ್ಲಮಾವಟಿ ವಿದ್ಯಾಸಂಸ್ಥೆಯಲ್ಲಿ ಸಮಾವೇಶ ಗೊಳ್ಳುವದರೊಂದಿಗೆ ಮಧ್ಯಾಹ್ನ 3 ಗಂಟೆಗೆ ಸಮಾರಂಭ ನಡೆಯಲಿದೆ ಎಂದರು.

ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಇವರೊಂದಿಗೆ ತ್ಯಾಜ್ಯ ವಿಲೇವಾರಿಯ ತಜ್ಞರು ಪಾಲ್ಗೊಂಡು, ಮನೆಗಳಲ್ಲಿ ಉತ್ಪತ್ತಿ ಯಾಗುವ ತ್ಯಾಜ್ಯ ಪದಾರ್ಥಗಳನ್ನು ಹೇಗೆ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಬಹುದು ಎನ್ನುವ ಬಗ್ಗೆ ಮಾಹಿತಿಯನ್ನು ಒದಗಿಸಲಿದ್ದಾರೆಂದು ತಿಳಿಸಿ, ಸಮಾರಂಭದಲ್ಲಿ ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇರುವದಾಗಿ ತಿಳಿಸಿದರು.

ಪ್ಲಾಸ್ಟಿಕ್ ನಿಷೇಧ: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಅಂಗಡಿ ಮುಂಗಟ್ಟು, ಹೊಟೇಲ್‍ಗಳಲ್ಲಿ ಗುಟ್ಕ, ಪಾನ್ ಪರಾಗ್ ಮಾರಾಟವನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಪಂಚಾಯಿತಿ ಸ್ವಚ್ಛತಾ ಆಂದೋಲನಕ್ಕೆ ಪೂರಕವಾಗಿ ಕೈಗೊಂಡಿರುವದಾಗಿ ಮನು ಮುತ್ತಪ್ಪ ತಿಳಿಸಿದರು.

ಮಾಹಿತಿ ಫಲಕ: ಬಲ್ಲಮಾವಟಿ ಪಂಚಾಯಿತಿಯನ್ನು ಮಾದರಿ ಸ್ವಚ್ಛತಾ ಪಂಚಾಯಿತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪಂಚಾಯಿತಿಯನ್ನು ಸಂಪರ್ಕಿಸುವ ಮೂರು ರಾಜ್ಯ ಹೆದ್ದಾರಿಗಳಲ್ಲಿ ಬೃಹತ್ ಕಮಾನುಗಳನ್ನು ಅಳವಡಿಸಿ, ಅದರಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವದಕ್ಕೆ ಪೂರಕವಾದ ಮಾಹಿತಿಯನ್ನು ಒದಗಿಸಲಾಗಿದೆ. ಇದರೊಂದಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಿಲೋ ಮೀಟರ್‍ಗೆ ಒಂದರಂತೆ 40 ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದರಲ್ಲಿ ರಸ್ತೆ ಬದಿ ಅಡುಗೆ ಮಾಡಕೂಡದು, ಪ್ಲಾಸ್ಟಿಕ್ ಸೇರಿದಂತೆ ಯಾವದೇ ತ್ಯಾಜ್ಯವನ್ನು ಮನಬಂದಂತೆ ನದಿ ಹಾಗೂ ಪರಿಸರಕ್ಕೆ ಒಗೆಯಬಾರದು ಹೀಗೆ ವಿವಿಧ ಮಾಹಿತಿಗಳನ್ನು ನೀಡಲಾಗಿದೆ. ಅ. 17 ರ ತುಲಾಸಂಕ್ರಮಣ ಜಾತ್ರೆಗೆ ಬಲ್ಲಮಾವಟಿ ಮೂಲಕ ತೆರಳುವ ಮಂದಿ ಇದನ್ನು ಅನುಸರಿಸಿದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದರು.

ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆಯ ಬಿತ್ತಿಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ನೀಡುವದರೊಂದಿಗೆ, ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗಳಿಗೆ ನೋಟಿಸ್ ನೀಡುವ ಮೂಲಕ, ಮನೆಯ ಆಸು ಪಾಸಿನಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ ಎಂದು ಮನು ಮುತ್ತಪ್ಪ ಮಾಹಿತಿ ನೀಡಿದರು.

ನಾಪೋಕ್ಲು ಲಯನ್ಸ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಮಾತನಾಡಿ, ನಾಪೋಕ್ಲು ವ್ಯಾಪ್ತಿಯ ನಾಲ್ಕು ಗ್ರಾ.ಪಂ.ಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಶಾಲೆಗಳಲ್ಲಿ ಸ್ವಚ್ಛತೆಯ ಕುರಿತು ರಸಪ್ರಶ್ನೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವದಾಗಿ ತಿಳಿಸಿದರು. ಬಲ್ಲಮಾವಟಿಯನ್ನು ಮಾದರಿ ಸ್ವಚ್ಛತಾ ಪಂಚಾಯಿತಿಯನ್ನಾಗಿ ರೂಪಿಸುವದು ತಮ್ಮ ಉದ್ದೇಶವೆಂದರು.

ಬಲ್ಲಮಾವಟಿ ಗ್ರಾ.ಪಂ. ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಮಾತನಾಡಿ, ಮನೆಯಲ್ಲಿ ದಿನ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನಗಳ ಮೂಲಕ ಹೇಗೆ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಬಹುದು ಎನ್ನುವ ವಿಚಾರಗಳನ್ನು ಮಹಿಳೆಯರು ಅರಿಯಬೇಕೆಂದರು.

ಗೋಷ್ಠಿಯಲ್ಲಿ ಬಲ್ಲಮಾವಟಿ ಗ್ರಾ.ಪಂ. ಸದಸ್ಯರುಗಳಾದ ಚಂಗೇಟಿರ ಕುಮಾರ್, ಬದ್ದಂಜೆಟ್ಟೀರ ದೇವಯ್ಯ ಹಾಗೂ ಬೈರುಡ ಮುತ್ತಪ್ಪ ಉಪಸ್ಥಿತರಿದ್ದರು.