ಮಡಿಕೇರಿ, ಸೆ. 29: ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರಕಾರವು ಇದೀಗ ರೂ. 85 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ರಾಜ್ಯ ಸರಕಾರದ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ಸೇವೆಗಳು-3) ಅಧೀನ ಕಾರ್ಯದರ್ಶಿ ವಸಂತ ಕುಮಾರ ಅವರು ರಾಜ್ಯದ ವಿವಿಧ ಇಲಾಖೆಗಳಿಗೆ ಒಟ್ಟು ರೂ. 200 ಕೋಟಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೊತ್ತವನ್ನು ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಉತ್ತರ ಕನ್ನಡ ಜಿಲ್ಲೆಗಳಿಗೆ ವಿಂಗಡಿಸಿ ಕಂದಾಯ ಇಲಾಖೆಯ ಹಿಂಬರಹವನ್ನು ಮುಂದುವರಿಸಿ ರಾಜ್ಯ ಸರಕಾರದÀ ಆರ್ಥಿಕ ಇಲಾಖೆ (ವೆಚ್ಚ 7 ಮತ್ತು 8) ಅಧೀನ ಕಾರ್ಯದರ್ಶಿ ಜಿ.ಎಸ್. ವೆಂಕಟೇಶ್ ಬಾಬು ಅವರು ಸಹಮತಿಸಿದ್ದು ಇದರಲ್ಲಿ ಕೊಡಗಿನ ಪಾಲು ರೂ. 85 ಕೋಟಿ ಎಂದು ನಿಗದಿಪಡಿಸಲಾಗಿದೆ.
ಕೊಡಗು ಜಿಲ್ಲೆಗೆ ಬಿಡುಗಡೆಗೊಂಡಿರುವ ಒಟ್ಟು ರೂ. 85 ಕೋಟಿ ಪೈಕಿ ಇಲಾಖಾವಾರು ವಿಂಗಡಣಾ ಮೊತ್ತ ಹೀಗಿದೆ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರೂ. 33.15 ಕೊಟಿ, ಲೋಕೋಪಯೋಗಿ ಇಲಾಖೆಗೆ ರೂ. 44.35 ಕೋಟಿ, ಇಂಧನ ಇಲಾಖೆಗೆ ರೂ. 2.06 ಕೋಟಿ, ನಗರಾಭಿವೃದ್ಧಿ ಇಲಾಖೆಗೆ ರೂ. 3.62 ಕೋಟಿ ಹಾಗೂ ನೀರಾವರಿ ಇಲಾಖೆಗೆ ರೂ. 1.82 ಕೋಟಿ ಅನುದಾನ ಕಲ್ಪಿಸಿರುವದಾಗಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. - ಕೆ.ಕೆ.ಎನ್.