ಸೋಮವಾರಪೇಟೆ, ಸೆ. 29: ತಾಲೂಕಿನ ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯ ಬಾಣಾವರ-ಸಂಗಯ್ಯನಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲನ್ನು ನಷ್ಟಪಡಿಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಹಲವಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಗಯ್ಯನಪುರ, ಬಾಣಾವರ, ಆಲದಮರ ವ್ಯಾಪ್ತಿಯಲ್ಲಿ 8 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ. ಗದ್ದೆಗಳಲ್ಲಿ ಮನಸೋಯಿಚ್ಚೆ ಸಂಚರಿಸಿ ರೈತರ ಕಂಗೆಡಿಸಿದೆ. ಇದರೊಂದಿಗೆ ರಸ್ತೆಯಲ್ಲಿ ತೆರಳಲೂ ಭಯಪಡುವಂತಾಗಿದೆ. ಈ ಬಗ್ಗೆ ಹಲವಷ್ಟು ಬಾರಿ ಅರಣ್ಯ ಇಲಾಖೆಯ ಗಮನ ಸೆಳೆದರೂ ಯಾವದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಅ.1ರಂದು ಬಾಣಾವರದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಳೆದ 20 ದಿನಗಳಿಂದ ನಿರಂತರವಾಗಿ ಕಾಡಾನೆ ಹಾವಳಿ ನಡೆಯುತ್ತಿದೆ. ಗ್ರಾಮದ ಮಧುಶಂಕರ್, ಸಿ.ಜಿ. ಪೂವಯ್ಯ, ಶಿವರಾಮ್, ಬಿ.ಎಂ. ರುಕ್ಮ, ಎ.ಎಲ್. ರಾಜೇಶ್, ಎಂ.ವಿ. ವೆಂಕಪ್ಪ, ಹೆಚ್.ಓ. ಬೋಪಯ್ಯ, ಬೆಳ್ಳಿಯಪ್ಪ ಸೇರಿದಂತೆ ಇತರರ ಕೃಷಿ ಪ್ರದೇಶಕ್ಕೆ ಧಾಳಿ ನಡೆಸಿ, ಭತ್ತದ ಪೈರು, ಗೆಣಸು, ಕಾಫಿ, ಜೋಳವನ್ನು ನಾಶಪಡಿಸಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯೋರ್ವರ ಮೇಲೆ ಕಾಡಾನೆ ಧಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಸಂದರ್ಭ, ಒಂದೆರಡು ದಿನಗಳ ಕಾಲ ಅರಣ್ಯ ಇಲಾಖೆಯಿಂದ ಸೋಲಾರ್ ಬೇಲಿ ಅಳವಡಿಕೆ ಕಾರ್ಯ ನಡೆದಿತ್ತು. ತದನಂತರ ಕಾಮಗಾರಿ ಸ್ಥಗಿತಗೊಂಡಿದೆ. ಅರಣ್ಯ ಇಲಾಖೆ ಕಣ್ಣೊರೆಸುವ ಕಾರ್ಯ ಮಾಡುತ್ತಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲೇಬೇಕೆಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಧು ಶಂಕರ್ ತಿಳಿಸಿದ್ದಾರೆ.