ಮಡಿಕೇರಿ, ಸೆ. 29: ಮೂರ್ನಾಡಿನ ಪದವಿಪೂರ್ವ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅರಮೇರಿ ವಿದ್ಯಾಪೀಠದ ಪ್ರಾಂಶುಪಾಲೆ ಕುಸುಮ, ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜನಿಕಂಡ ಮಹೇಶ್ ನಾಚಯ್ಯ ಹಾಗೂ ಜಾನ್ಸಿ ಅವರು ಆಗಮಿಸಿದ್ದರು.

ಸಂವಹನ ಇಂಗ್ಲಿಷ್ ತರಗತಿಯಲ್ಲಿ ಕುಸುಮ ಅವರು ಇಂಗ್ಲಿಷ್ ಭಾಷೆಯ ಪ್ರಾಮುಖ್ಯತೆ ಹಾಗೂ ಇಂಗ್ಲಿಷನ್ನು ಮಾತನಾಡಲು ಮತ್ತು ಓದಲು ಕಲಿಯುವದು ಬಹು ಮುಖ್ಯ. ಪ್ರತಿ ದಿನವು ಕನ್ನಡಿಯ ಮುಂದೆ ನಿಂತು ನಮಗೆ ನಾವೇ ಇಂಗ್ಲಿಷ್‍ನಲ್ಲಿ ಮಾತನಾಡಿಕೊಂಡಾಗ ಇಂಗ್ಲಿಷ್ ಮಾತನಾಡಲು ಆತ್ಮವಿಶ್ವಾಸ ಮೂಡುವದೆಂದು ಸಲಹೆ ನೀಡಿದರು. ಅದಲ್ಲದೆ ಪ್ರತಿ ದಿನವು ಹತ್ತು ನಿಮಿಷಗಳ ಕಾಲ ಇಂಗ್ಲಿಷನ್ನು ಗಟ್ಟಿಯಾಗಿ ಓದುತ್ತಾ ನಮ್ಮ ಧ್ವನಿಯನ್ನು ನಾವೇ ರೆಕಾರ್ಡ್ ಮಾಡಿ ಕೇಳಿದಾಗ ನಮ್ಮಲ್ಲಿ ಇನ್ನಷ್ಟು ಇಂಗ್ಲಿಷ್ ಕಲಿಯಲು ಆತ್ಮವಿಶ್ವಾಸ ಮೂಡುವದೆಂದು ಕಿವಿಮಾತು ಹೇಳಿದರು.

ಪತ್ರಿಕೋದ್ಯಮ ಮತ್ತು ಮಾಧ್ಯಮ ಕೌಶಲ್ಯದ ಬಗ್ಗೆ ಅಜ್ಜನಿಕಂಡ ಮಹೇಶ್ ಮಾತನಾಡಿ, ಪ್ರತಿಕೋದ್ಯಮದಲ್ಲಿ ಬರೆಯುವ ಸಾಮಥ್ರ್ಯ ನಿರಂತರ ಓದುವಿಕೆಯುಳ್ಳವರಿಗೆ ಸುಲಭ ಸಾಧ್ಯ ಮತ್ತು ಪತ್ರಿಕೋದ್ಯಮದಲ್ಲಿನ ಅವಕಾಶಗಳು ಹಾಗೂ ಪತ್ರಕರ್ತನಿಗೆ ಇರಬೇಕಾದ ಮಾನದಂಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಪತ್ರಿಕೆಯನ್ನು ಪ್ರಾರಂಭಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು.

ಯೋಗ ಮತ್ತು ಧ್ಯಾನದ ತರಗತಿಯಲ್ಲಿ ಜಾನ್ಸಿ ಅವರು ವಿವಿಧ ರೀತಿಯ ಯೋಗ ಮತ್ತು ಆಸನಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದರು.