ಮೂರ್ನಾಡು, ಸೆ. 29: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಮುಂದೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳವದರೊಂದಿಗೆ ತಮ್ಮ ಬೆಳವಣಿಗೆಯ ಜೊತೆಗೆ ರಾಷ್ಟ್ರದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಪಾಲಿಬೆಟ್ಟದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಯೋಜನಾಧಿಕಾರಿ ಶಿವದಾಸ್ ಹೇಳಿದರು.

ಮೂರ್ನಾಡು ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಎನ್‍ಎಸ್‍ಎಸ್ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಪ್ರಾರಂಭವಾದ ಸಮಯದಲ್ಲಿ 27 ವಿಶ್ವವಿದ್ಯಾನಿಲಯದಿಂದ 40 ಸಾವಿರ ಸ್ವಯಂ ಸೇವಕರು ಇದ್ದರು. ಆದರೆ ಇಂದು ದೇಶದಲ್ಲಿ 3.72 ಕೋಟಿ ಎನ್‍ಎಸ್‍ಎಸ್ ಸ್ವಯಂ ಸೇವಕರು ಸೇವಾ ಮನೋಭಾವನೆಯಿಂದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಂದೇಟಿರ ರಾಜಾ ಮಾದಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ಎನ್‍ಎಸ್‍ಎಸ್ ಘಟಕದ ಯೋಜನಾಧಿಕಾರಿ ಯು.ಸಿ. ಮಾಲತಿ ಉಪಸ್ಥಿತರಿದ್ದರು.

ಎನ್‍ಎಸ್‍ಎಸ್ ವಿದ್ಯಾರ್ಥಿಗಳಾದ ಕೃಪ ಮತ್ತು ತಂಡ ಪ್ರಾರ್ಥಿಸಿ, ಫಾತಿಮ ಕಾರ್ಯಕ್ರಮ ನಿರೂಪಿಸಿ, ಯೋಜನಾಧಿಕಾರಿ ಮಾಲತಿ ಸ್ವಾಗತಿಸಿ, ಪುನೀತ ವಂದಿಸಿದರು.