ಸೋಮವಾರಪೇಟೆ, ಸೆ. 29: ಮಹಾಮಳೆ, ಪ್ರವಾಹ ಸಂದರ್ಭ ಚೌಡ್ಲು ಗ್ರಾಮ ಪಂಚಾಯಿತಿಗೆ ಹೊರಭಾಗದಿಂದ ಆಗಮಿಸಿದ ಪರಿಹಾರ ಸಾಮಗ್ರಿಗಳನ್ನು ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಮತ್ತು ಸಿಬ್ಬಂದಿಗಳು ತಮ್ಮ ಮನೆಗೆ ಸಾಗಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಇಡೀ ಪ್ರಕರಣವನ್ನು ತನಿಖೆ ಗೊಳಪಡಿಸಬೇಕೆಂದು ಗಾಂಧಿನಗರದ ಮಾರಿಯಮ್ಮ ದೇವಾಲಯ ಸಮಿತಿ ಮತ್ತು ಆಲೇಕಟ್ಟೆಯ ಭಾರತೀಯ ಯುವಕ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಅರ್ಹ ಫಲಾನುಭವಿಗಳಲ್ಲದೇ ಇರುವವರು ಪಡಿತರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದರೆ, ಅಂತಹ ಕ್ರಮ ಖಂಡನೀಯ. ಈ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಭಾರತೀಯ ಯುವಕ ಸಂಘದ ಅಧ್ಯಕ್ಷ ಶ್ರೀಕಾಂತ್ ಆಗ್ರಹಿಸಿದ್ದಾರೆ. ಇದರೊಂದಿಗೆ ಚೌಡ್ಲು ಗ್ರಾ.ಪಂ.ನಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ವಾರ್ಡ್ ಮತ್ತು ಗ್ರಾಮ ಸಭೆಗಳನ್ನೂ ನಡೆಸುತ್ತಿಲ್ಲ. ಇದರಿಂದಾಗಿ ಗ್ರಾಮಸ್ಥರ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ಗ್ರಾ.ಪಂ. ಸಿಬ್ಬಂದಿಯೋರ್ವರು ಜಾತಿನಿಂದನೆ ಮಾಡಿದ ಬಗ್ಗೆ ತಹಶೀಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಮಾರಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ದುರ್ಗೇಶ್ ಆರೋಪಿಸಿದ್ದಾರೆ.

ದುರುಪಯೋಗಕ್ಕೂ ನಮಗೂ ಸಂಬಂಧವಿಲ್ಲ: ಗ್ರಾಮ ಪಂಚಾಯಿತಿಯಲ್ಲಿ ಸಂತ್ರಸ್ತರಿಗೆಂದು ಇಡಲಾಗಿದ್ದ ಪಡಿತರ ಸಾಮಗ್ರಿ ದುರುಪಯೋಗವಾಗಿರುವ ಪ್ರಕರಣಕ್ಕೂ ತಮಗೂ ಯಾವದೇ ಸಂಬಂಧವಿಲ್ಲ ಎಂದು 14 ಸದಸ್ಯ ಬಲ ಹೊಂದಿರುವ ಚೌಡ್ಲು ಗ್ರಾ.ಪಂ.ನ 8 ಮಂದಿ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕೆಯಲ್ಲಿ ಗ್ರಾ.ಪಂ.ನ ಮೂರು ಮಂದಿ ಸದಸ್ಯರು ಮತ್ತು 6 ಮಂದಿ ಸಿಬ್ಬಂದಿಗಳೆಂದು ಪ್ರಕಟವಾಗಿದ್ದು, ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ವ್ಯವಹಾರಗಳ ಬಗ್ಗೆ ನಮಗೆ ಯಾವದೇ ಮಾಹಿತಿಯಿಲ್ಲ. ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಸಂತ್ರಸ್ತರಿಗೆ ಸಲ್ಲಬೇಕಾಗಿದ್ದ ಪರಿಹಾರ ಸಾಮಗ್ರಿಗಳನ್ನು ಯಾರು ತೆಗೆದು ಕೊಂಡು ಹೋಗಿದ್ದಾರೆ ಎಂಬದನ್ನು ಬಹಿರಂಗಪಡಿಸಬೇಕೆಂದು ಸದಸ್ಯರುಗಳಾದ ಎ.ಎಸ್. ಧರ್ಮ, ಜಯಲಕ್ಷ್ಮೀ ಸುಬ್ರಮಣಿ, ವಜನಾ ರವಿ, ಲೋಲಾಕ್ಷಿ, ನರಸಿಂಹ, ಅಜೀಜ್, ಗಿರೀಶ್ ಮತ್ತು ಶಾರದ ಕಿಟ್ಟು ಅವರುಗಳು ಪ್ರತಿಕ್ರಿಯೆ ನೀಡಿದ್ದಾರೆ.