ಸುಂಟಿಕೊಪ, ಸೆ. 29: ಸುಂಟಿಕೊಪ್ಪ ಹೋಬಳಿ ಕಂದಾಯ ಗ್ರಾಮದಲ್ಲಿ ಅತಿವೃಷ್ಟಿಯಿಂದ ಮನೆ ಕಾಫಿತೋಟ ಗದ್ದೆ, ವಾಣಿಜ್ಯ ಬೆಳೆಗಳು ಹಾನಿಯಾದ ಪ್ರದೇಶಗಳಿಗೆ ಕಂದಾಯ ಇಲಾಖೆ ತೋಟಗಾರಿಕಾ ಇಲಾಖೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ತೆರಳಿ ನೊಂದವರಿಗೆ ಪರಿಹಾರಕ್ಕಾಗಿ ಜಂಟಿ ಸರ್ವೆ ಕಾರ್ಯ ನಡೆಸಿದರು. ಮಳೆ ಹಾನಿಗೊಳಗಾದ ಕೆದಕಲ್ ಹಾಲೇರಿ ಕೊಪ್ಪತ್ತೂರು ಕಾಂಡನಕೊಲ್ಲಿ ಹಾಡಗೇರಿ ಮುವತೋಕ್ಲು ಶಿರಂಗಳ್ಳಿ ಕುಂಬೂರು ಗರ್ವಾಲೆ ಮಂಕ್ಯ ಕುಂಬಾರಗಡಿಗೆ ಈ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕಾಫಿ ತೋಟ, ಗದ್ದೆ ಸಂಪೂರ್ಣ ಕೊಚ್ಚಿ ಹೋಗಿ ಮಣ್ಣು ಪಾಲಾಗಿದ್ದನ್ನು ವೀಕ್ಷೀಸಿ ವರದಿ ತಯಾರಿಸಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರಿಂದ ಮಾಹಿತಿ ಕಲೆ ಹಾಕಿದ್ದಾರೆ. ಈ ತಂಡ ಖುದ್ದು ಪರಶೀಲಿಸಿದ ನಂತರ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನಿರಾಶ್ರಿತರಿಗೆ ಪರಿಹಾರಕ್ಕಾಗಿ ವರದಿ ನೀಡಲಿದ್ದಾರೆ. ಈ ಸಂದರ್ಭ ಸುಂಟಿಕೊಪ್ಪ ಹೋಬಳಿ ಕಂದಾಯ ಪರಿವೀಕ್ಷಕ ಹೆಚ್.ಎಸ್. ಶಿವಪ್ಪ ಗ್ರಾಮ ಲೆಕ್ಕಿಗರಾದ ಪರಮೇಶ, ಯಶವಂತ್, ಉಮೇಶ್, ಕಾಫಿ ಮಂಡಳಿ ವ್ಯವಸ್ಥಾಪಕ ರಮೇಶ್, ತೋಟಗಾರಿಕ ಇಲಾಖೆ ಅಧಿಕಾರಿಗಳು ಹಾಜರಿದ್ದರು.