ಮಡಿಕೇರಿ, ಸೆ. 28: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗ್ರಾಮ ಪಂಚಾಯತ್ ಸಂಪಾಜೆ, ಚೆಂಬು, ಪೆರಾಜೆ, ಮದೆನಾಡು, ಮತ್ತು ಗಾಳಿಬೀಡು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸ್ಮಿತಾ ಐ ಕೇರ್ ಸೆಂಟರ್ ಮಡಿಕೇರಿ, ಅಂಧತ್ವ ನಿವಾರಣಾ ಸಮಿತಿ, ಸಂಪಾಜೆ ಲಯನ್ಸ್ ಕ್ಲಬ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ನೇತ್ರ ಪರೀಕ್ಷೆ ಮತ್ತು ಕಣ್ಣು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆಯಲ್ಲಿ ಬಾಲಚಂದ್ರ ಕಳಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ನಳಿನಿ ಕಿಶೋರ್, ಇ.ವಿ. ಪ್ರಶಾಂತ್, ರವಿಶಂಕರ್ ಜೆ.ಆರ್., ದೇವಿಪ್ರಸಾದ್ ಉದ್ಘಾಟಿಸಿದರು.

ಡಾ|| ಎ.ಸಿ. ಶಿವಕುಮಾರ್ ಡಿ.ಟಿ.ಓ. ಮಡಿಕೇರಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಅತಿಥಿಗಳಾಗಿ ಡಾ|| ಪ್ರಶಾಂತ್, ಡಾ|| ವಿಕ್ರಂ, ಡಾ|| ಜಿ.ಕೆ. ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು. ನೇತ್ರದಾನ ಶಸ್ತ್ರ ಚಿಕಿತ್ಸೆ ಆರೋಗ್ಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಶಿಬಿರದಲ್ಲಿ ಸುಮಾರು 160 ಜನರಿಗೆ ಕಣ್ಣಿನ ಪರೀಕ್ಷೆ ನಡೆಸಲಾಯಿತು. 80 ಜನರಿಗೆ ಓದಲು ಉಪಯೋಗಿಸುವ ಕನ್ನಡಕವನ್ನು ಉಚಿತವಾಗಿ ವಿತರಿಸಲಾಯಿತು. 20 ಜನರನ್ನು ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು.

ಶಿಬಿರದಲ್ಲಿ ಭಾಗವಹಿಸಿದವರಿಗೆ ಲಯನ್ಸ್ ಕ್ಲಬ್ ಸಂಪಾಜೆ ಮತ್ತು ರೋಟರಿ ಮಿಸ್ಟ್ರಿ ಹಿಲ್ಸ್ ಮಡಿಕೇರಿ ಇವರ ವತಿಯಿಂದ ಉಪಹಾರ ಮತ್ತು ಭೋಜನ ವ್ಯವಸ್ಥೆಯನ್ನು ಮಾಡಲಾಯಿತು. ಡಾ|| ಸದಾನಂದ ನಾಯಕ್ ಚಿಕಾಗೊ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಶಿಬಿರದಲ್ಲಿ ಪ್ರಕೃತಿ ವಿಕೋಪದಿಂದ ಮನೆ, ಆಸ್ತಿ ಕಳೆದು ಕೊಂಡಿರುವ ಮೊಣ್ಣಂಗೇರಿ, ಜೋಡುಪಾಲ ಗ್ರಾಮದ ನಿರಾಶ್ರಿತರು ಪಾಲ್ಗೊಂಡಿದ್ದರು. ಆರೋಗ್ಯ ಇಲಾಖಾ ಸಿಬ್ಬಂದಿ ವರ್ಗದವರು , ಆಶಾ ಕಾರ್ಯಕರ್ತೆಯರು, ಲಯನ್ಸ್ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಡಾ|| ಡಿವಿನ್ ಮಾನಸಿಕ ತಜ್ಞರು ಮತ್ತು ಅವರ ತಂಡದವರು ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಗಿರಿಜಾ ಪ್ರಾರ್ಥಿಸಿದರು, ಗುರುಪ್ರಸಾದ್ ಸ್ವಾಗತಿಸಿ, ನಿರೂಪಿಸಿದರು. ಲೋಕನಾಥ್ ವಂದಿಸಿದರು.