ಮಡಿಕೇರಿ, ಸೆ. 28: ಕರ್ಣಂಗೇರಿ ಗ್ರಾಮದ ಸುದರ್ಶನ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೌರ ಕಾರ್ಮಿಕರ ವಸತಿ ಗೃಹದ ಯೋಜನೆಯನ್ನು ಕೈಬಿಡಬೇಕೆಂದು ಸ್ಥಳೀಯ ಕೆಲವು ನಿವಾಸಿಗಳು ಒತ್ತಾಯಿಸಿದ್ದಾರೆ.
ಸರ್ವೆ ನಂ. 512/1 ರಲ್ಲಿ 0.35 ಸೆಂಟ್ ಜಾಗವು ಪೌರಕಾರ್ಮಿಕರ ಸಂಘಕ್ಕೆ ಮಂಜೂರಾಗಿದ್ದು, ಈ ಜಾಗದಲ್ಲಿ ಪೌರ ಕಾರ್ಮಿಕರಿಗೆ ವಸತಿ ಗೃಹ ನಿರ್ಮಾಣ ಮಾಡಲು ನಗರಸಭೆ ಮುಂದಾಗಿದೆ. ಉದ್ದೇಶಿತ ಜಾಗ ಎತ್ತರದಲ್ಲಿದ್ದು, ಕೆಳ ಭಾಗ ವಸತಿ ಪ್ರದೇಶವಾಗಿದೆ. ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಮಡಿಕೇರಿ ನಗರ ಸೇರಿದಂತೆ ಅನೇಕ ಕಡೆ ಬೆಟ್ಟಗುಡ್ಡಗಳು ಕುಸಿದು ಅನಾಹುತಗಳು ಸಂಭವಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದೀಗ ಪೌರ ಕಾರ್ಮಿಕರ ವಸತಿ ಗೃಹ ನಿರ್ಮಿಸುವ ಪ್ರದೇಶವೂ ಜಲಮೂಲಗಳಿಂದ ಕೂಡಿದೆ. ಮಳೆ ನಿಂತರೂ ನೀರಿನಾಂಶವಿದ್ದು, ಬೆಟ್ಟದಲ್ಲಿ ಕಟ್ಟಡ ನಿರ್ಮಿಸಿದಲ್ಲ್ಲಿ ಅನಾಹುತ ಸಂಭವಿಸಬಹುದೆಂದು ಮನವಿಯಲ್ಲಿ ತಿಳಿಸಿರುವ ಕಾವೇರಪ್ಪ, ಗಣಪತಿ, ಹೆಚ್.ಬಿ. ರಾಜು, ಧನಂಜಯ್, ವಸಂತ, ಚಂದ್ರು, ಪೊನ್ನಪ್ಪ ಮತ್ತಿತರರು ವಸತಿ ಗೃಹ ಕಟ್ಟಡ ಅಥವಾ ಯಾವದೇ ಸರ್ಕಾರಿ ಕಟ್ಟಡವನ್ನು ನಿರ್ಮಾಣ ಮಾಡಲು ಇಲ್ಲಿ ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿಗಳನ್ನು ಕೋರಿಕೊಂಡಿದ್ದಾರೆ. ನಗರಸಭಾ ಪೌರಾಯುಕ್ತರಿಗೂ ಮನವಿಪ್ರತಿ ನೀಡಲಾಗಿದೆ ಎಂದು ಕಾವೇರಪ್ಪ ತಿಳಿಸಿದ್ದಾರೆ.