ಸೋಮವಾರಪೇಟೆ, ಸೆ. 28: ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು. ವಿದ್ಯಾರ್ಥಿಗಳೂ ಸೇರಿದಂತೆ ಸಮಾಜ ಶಿಕ್ಷಕರನ್ನು ಗೌರವಿಸುವಂತಾಗಬೇಕೆಂದು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಪರ್ಣ ಕೃಷ್ಣಾನಂದ್ ಹೇಳಿದರು.
ರೋಟರಿ ಕ್ಲಬ್ ಸೋಮವಾರ ಪೇಟೆ ಹಿಲ್ಸ್ ವತಿಯಿಂದ ಪಟ್ಟಣದ ಸುವಿಧ್ ಸಭಾಂಗಣದಲ್ಲಿ ಆಯೋಜಿ ಸಿದ್ದ “ನೇಷನ್ ಬಿಲ್ಡರ್ಸ್” ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ಧೇಶಿಸಿ ಅವರು ಮಾತ ನಾಡಿದರು. ಸಮಾಜದಲ್ಲಿನ ಪ್ರತಿಯೊಬ್ಬರೂ ತಮಗೆ ಶಿಕ್ಷಣ ಕಲಿಸಿ, ವ್ಯಕ್ತಿಯನ್ನಾಗಿ ರೂಪಿಸಿದವರನ್ನು ಮರೆಯಬಾರದು. ಒಂದೊಂದು ಉನ್ನತ ಮೆಟ್ಟಿಲನ್ನೇರಿದಾಗಲೂ ತಮಗೆ ಪಾಠ ಕಲಿಸಿದ ಶಿಕ್ಷಕರನ್ನು ಸ್ಮರಿಸುವಂತಹ ಗುಣಗಳನ್ನು ಮೈಗೂಡಿಸಿಕೊಳ್ಳ ಬೇಕೆಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ. ರವಿ ಮಾತನಾಡಿ, ಸಮಾಜವನ್ನು ರೂಪಿಸುವ ಶಿಕ್ಷಕರನ್ನು ಗೌರವಿಸುವದು ನಮ್ಮ ಕರ್ತವ್ಯ ವಾಗಿದ್ದು, ಅವರುಗಳನ್ನು ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸು ವದು ಹಾಗೂ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಸಮಾರಂಭದಲ್ಲಿ ಆಲೂರು-ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಡಿ.ಆರ್. ಸುರೇಶ್, ದೊಡ್ಡಮಳ್ತೆ ಸ.ಹಿ.ಮಾ. ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ವಿ. ಜ್ಯೋತಿ, ನಿಡ್ತ ಸರಕಾರಿ ಪ್ರೌಢಶಾಲಾ ಶಿಕ್ಷಕ ಪಿ. ವಿಶ್ವನಾಥ್, ಅಂಕನಳ್ಳಿ ಸರಕಾರಿ ಪ್ರೌಢಶಾಲಾ ಶಿಕ್ಷಕ ಜಿ.ಎಂ. ಹೇಮಂತ್, ನಂದಿಗುಂದ ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಕೆ.ಡಿ. ಕಾಳಮ್ಮ, ಬೆಟ್ಟದಳ್ಳಿ ಸ.ಹಿ.ಪ್ರಾ. ಶಾಲಾ ಶಿಕ್ಷಕ ಟಿ.ಜೆ. ವೆಂಕಟೇಶ್, ಹಂಡ್ಲಿ ಸ.ಹಿ.ಪ್ರಾ. ಶಾಲೆಯ ಶಿಕ್ಷಕ ಎನ್.ಬಿ. ಕೃಷ್ಣ ಹಾಗೂ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲಾ ಶಿಕ್ಷಕ ಟಿ.ಜಿ. ಪ್ರೇಮ್ಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಪಿ. ನಾಗೇಶ್ ಉಪಸ್ಥಿತರಿದ್ದರು.