ಶನಿವಾರಸಂತೆ, ಸೆ. 28: ಅಪ್ರಾಪ್ತೆಯೊಬ್ಬಳು ಜನ್ಮವಿತ್ತಿದ್ದ ಮಗು ಸಾವಿಗೀಡಾಗಿದ್ದು, ಮಣ್ಣು ಮಾಡಿದ್ದ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುವದರೊಂದಿಗೆ ಪ್ರಕರಣ ದಾಖಲಾಗಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾರೆ ಹೊಸೂರು ಗ್ರಾಮದ ಗಿರಿಜನ ಕಾಲೋನಿಯ ನಿವಾಸಿಗಳಾದ ಚಂದನಾ ಮತ್ತು ರಘು ಇಬ್ಬರೂ ಅಪ್ರಾಪ್ತರಾಗಿದ್ದು, ವರ್ಷದಿಂದೆ ವಿವಾಹವಾಗಿದ್ದರು. ಅಪ್ರಾಪ್ತೆ ಚಂದನಾ ಎರಡು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಬಳಿಕ ಈ ಮಗು ಮೃತಪಟ್ಟಿತ್ತು. ಮಗುವಿನ ಶವವನ್ನು ಈ ದಂಪತಿಗಳು ಮಣ್ಣು ಮಾಡಿದ್ದರು. ಈ ವಿಚಾರ ಬೆಳಕಿಗೆ ಬಂದಿದ್ದು, ಅಂಗನವಾಡಿ ಕಾರ್ಯಕರ್ತೆ ವರಲಕ್ಷ್ಮಿ ಎಂಬವರು ನೀಡಿದ ದೂರಿನಂತೆ ಇದೀಗ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಉಪಸ್ಥಿತಿಯಲ್ಲಿ ವೈದ್ಯಾಧಿಕಾರಿ ಕಿಶೋರ್ ಮರಣೋತ್ತರ ಪರೀಕ್ಷೆ ನಡೆಸಿದರು. ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಮರಿಸ್ವಾಮಿ, ಸಿಬ್ಬಂದಿಗಳಾದ ಶಶಿ, ಮಹದೇಶ್ವರ ಸ್ವಾಮಿ, ಮಂಜುನಾಥ್ ಸೇರಿದಂತೆ ಕಂದಾಯ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.