ಮಡಿಕೇರಿ, ಸೆ. 28: ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಬೀಟಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಘಟಕದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ವಾಹನ ಸಹಿತ ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಹಾಲುಗುಂದ ಗ್ರಾಮ ನಿವಾಸಿ, ಪಂದಿಕಂಡ ಡೆನ್ನಿ ದೇವಯ್ಯ ಬಂಧಿತ ವ್ಯಕ್ತಿ.
ಆರೋಪಿ ಮರಗೋಡು ಕಟ್ಟೆಮಾಡು ಮಾರ್ಗವಾಗಿ ಕೊಂಡಂಗೇರಿ ಕಡೆಗೆ ಪಿಕ್ ಅಪ್ ವಾಹನ (ಕೆ.ಎ. 11. 4705)ದಲ್ಲಿ ಮರ ಸಾಗಿಸುತ್ತಿದ್ದ ಸಂದರ್ಭ ಸುಳಿವರಿತ ಪೊಲೀಸರ ತಂಡ ಧಾಳಿ ನಡೆಸಿ ಮಾಲು ಸಹಿತ ವಾಹನ ಹಾಗೂ ಈತನನ್ನು ಬಂಧಿಸಿದೆ. ವಾಹನ ಹಾಗೂ ಮರದ ಮೌಲ್ಯ ರೂ. 7 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಬಂಧಿತ ಆರೋಪಿ ಹಲವಾರು ತೋಟಗಳಿಂದ ಇದೇ ರೀತಿಯಲ್ಲಿ ಮರ ಕಳವು ಮಾಡುವ ಚಾಳಿ ಹೊಂದಿದ್ದಾನೆ. ಅಲ್ಲದೆ ಈತನ ವಿರುದ್ಧ ಇತರ ಪೊಲೀಸ್ ಮೊಕದ್ದಮೆಗಳೂ ಇರುವದಾಗಿ ತಿಳಿದು ಬಂದಿದೆ. ಇದೀಗ ವಶಪಡಿಸಿಕೊಂಡಿರುವ ಬೀಟಿ ಮರ ಮುತ್ತಾರ್ಮುಡಿಯ ತೋಟವೊಂದರಿಂದ ಅಪಹರಿಸಿದ್ದಾಗಿ ಹೇಳಲಾಗಿದೆ. ಅರಣ್ಯ ಕಾನೂನಿನಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುಭಾಷ್, ನಾಣಯ್ಯ, ಲಿಂಗರಾಜ್, ನವೀನ್, ಮಧು ಪಾಲ್ಗೊಂಡಿದ್ದರು. ತಾ. 26 ರಂದು ಅಪರಾಹ್ನ ಒಂದು ಗಂಟೆಯ ಸಮಯದಲ್ಲಿ ಕಟ್ಟೆಮಾಡು ಬಳಿಯಲ್ಲಿ ಈ ಪ್ರಕರಣ ಪತ್ತೆಯಾಗಿದೆ.