ಸೋಮವಾರಪೇಟೆ, ಸೆ.28: ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯನ್ನು ದಿಢೀರ್ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿಬ್ಬಂದಿಗಳು ಮತ್ತು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಇಂದು ಕಚೇರಿ ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಬಿಇಓ ಕಚೇರಿ ಕಟ್ಟಡಕ್ಕೆ ಒತ್ತಿಕೊಂಡಂತೆ ಇರುವ ಕಟ್ಟಡಗಳಲ್ಲಿ ಅಂಬೇಡ್ಕರ್ ವಸತಿ ಶಾಲೆ ಈಗಾಗಲೇ ಕಾರ್ಯಾರಂಭ ಮಾಡಿದ್ದು, ನಿನ್ನೆ ದಿನ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ತಕ್ಷಣ ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದು, ನಮ್ಮೊಂದಿಗೆ ಉದ್ದಟತನದಿಂದ ವರ್ತಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಇಲ್ಲದ ಸಂದರ್ಭ ಕಚೇರಿ ಸಿಬ್ಬಂದಿಗಳ ಮೇಲೆ ರೇಗಾಡಿದ್ದಾರೆ ಎಂದು ಪ್ರತಿಭಟನೆಯಲ್ಲಿದ್ದ ಸಿಬ್ಬಂದಿಗಳು ಆರೋಪಿಸಿದರು.
ಕಳೆದ ಅನೇಕ ದಶಕಗಳಿಂದ ಇದೇ ಕಟ್ಟಡದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗಷ್ಟೇ ಸ್ಥಳಾಂತರಗೊಂಡಿರುವ ಅಂಬೇಡ್ಕರ್ ವಸತಿ ಶಾಲೆಗೆ ಈಗಾಗಲೇ ಎರಡು ಸಭಾಂಗಣವನ್ನು ಬಿಟ್ಟುಕೊಡಲಾಗಿದೆ. ತಾಲೂಕಿನ ವಿದ್ಯಾರ್ಥಿಗಳ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ 3 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಲಾಗಿದ್ದ ಸಭಾಂಗಣವನ್ನು ಏಕಾಏಕಿ ತೆರವುಮಾಡಲಾಗಿದೆ. ಇದೀಗ ಕಚೇರಿಯನ್ನೇ ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸುತ್ತಿರುವದು ಖಂಡನೀಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಬದಲಿ ಕಟ್ಟಡ ಗುರುತಿಸದೇ ಇನ್ನೆರಡು ದಿನಗಳಲ್ಲಿ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಕಚೇರಿಯನ್ನು ಎಲ್ಲಿಗೆ ಸ್ಥಳಾಂತರಿಸಬೇಕು. ಸಾವಿರಾರು ವಿದ್ಯಾರ್ಥಿಗಳು ಮತ್ತು 3 ಸಾವಿರಕ್ಕೂ ಅಧಿಕ ಶಿಕ್ಷಕರ ದಾಖಲೆಗಳನ್ನು ಮರದ ಕೆಳಗೆ ಇಟ್ಟುಕೊಂಡು ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಶಿಕ್ಷಕರು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಸಹ ಗಂಭೀರವಾಗಿ ಚಿಂತಿಸಬೇಕು ಎಂದು ಆಗ್ರಹಿಸಿದರು.
ಬಿಇಓ ಕಚೇರಿಯ ತ್ರಿಶಂಕು ಸ್ಥಿತಿಯ ಬಗ್ಗೆ ಶಾಸಕರು, ಜಿ.ಪಂ. ಅಧ್ಯಕ್ಷರು, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ತಾಲೂಕು ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗಿದೆ. ತಕ್ಷಣ ಈ ಬಗ್ಗೆ ಸ್ಪಂದಿಸಿ ಕ್ರಮಕ್ಕೆ ಮುಂದಾಗದಿದ್ದಲ್ಲಿ ಸೋಮವಾರದಿಂದ ತಾಲೂಕಿನಾದ್ಯಂತ ಎಲ್ಲಾ ಶಿಕ್ಷಕರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಎಚ್ಚರಿಸಿದರು.
ಕಚೇರಿಯನ್ನು ಸ್ಥಳಾಂತರಿಸಿ ಎಂದಷ್ಟೇ ಎಲ್ಲರೂ ಹೇಳುತ್ತಿದ್ದಾರೆ. ಆದರೆ ಯಾವ ಕಟ್ಟಡಕ್ಕೆ ಎಂಬದನ್ನು ಮಾತ್ರ ತಿಳಿಸುತ್ತಿಲ್ಲ. ಸಕಲ ಸೌಕರ್ಯಗಳನ್ನು ಒದಗಿಸಿದರೆ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ. ಆದರೆ ಯಾವದೇ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ಸ್ಥಳಾಂತರಗೊಳ್ಳಿ ಎಂದರೆ ಎಲ್ಲಿಗೆ ಹೋಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಪ್ರಶ್ನಿಸಿದ್ದಾರೆ.
ಈ ಸಂದರ್ಭ ಶಿಕ್ಷಕರ ಸಂಘದ ವಲಯ ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ತಾಲೂಕು ಉಪಾಧ್ಯಕ್ಷ ಪ್ರಕಾಶ್, ಸಹ ಕಾರ್ಯದರ್ಶಿ ರಾಜಪ್ಪ, ಕಚೇರಿ ಸಿಬ್ಬಂದಿಗಳಾದ ಚನ್ನಪ್ಪ, ದಿನೇಶ್, ಚಿದಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜನಪ್ರತಿನಿಧಿಗಳ ಭೇಟಿ: ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಬಿಇಓ ಕಚೇರಿ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ, ಸಂಜೆಯ ವೇಳೆಗೆ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಅವರುಗಳು ಭೇಟಿ ನೀಡಿದರು.
ಜಿಲ್ಲಾಧಿಕಾರಿಗೆ ಮನವಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಜೂನಿಯರ್ ಕಾಲೇಜು ಬಳಿಯಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಆದರೆ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಈ ಹಿನ್ನೆಲೆ ಒಂದು ವಾರಗಳ ಕಾಲ ಕಾಲಾವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವದು. ವ್ಯವಸ್ಥೆ ಪೂರ್ಣಗೊಂಡ ಬಳಿಕ ಕಚೇರಿ ಸ್ಥಳಾಂತರಿಸಲಾಗುವದು ಎಂದು ಬಿಇಓ ನಾಗರಾಜಯ್ಯ ತಿಳಿಸಿದ್ದಾರೆ.