ಮಡಿಕೇರಿ, ಸೆ. 28: ಏಕಾತ್ಮ ಮಾನವತಾವಾದದ ಪ್ರತಿ ಪಾದಕರೂ ಭಾರತೀಯ ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಪಂ. ದೀನದಯಾಳ್ ಉಪಾಧ್ಯಾಯ ಅವರ ಜನ್ಮ ಜಯಂತಿಯನ್ನು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮಹಿಳಾ ಘಟಕದಿಂದ ಆಚರಿಸುವದರೊಂದಿಗೆ, ದೀನದಯಾಳ್ ಉಪಾಧ್ಯಯರ ಆದರ್ಶ ಪಾಲಿಸಲು ಕರೆ ನೀಡಲಾಯಿತು.
ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು, ದೀನದಯಾಳರು ದೇಶದ ಏಕತೆಯೊಂದಿಗೆ ಸಮಾಜದ ಶೋಷಿತರು, ಅಬಲೆಯರ ಬಗ್ಗೆ ಹೊಂದಿದ್ದ ದೂರದೃಷ್ಟಿ , ಚಿಂತನೆಗಳನ್ನು ಮೆಲುಕು ಹಾಕುತ್ತಾ, ದೇಶಕ್ಕಾಗಿ ಬಲಿದಾನಗೈದ ಅವರ ತ್ಯಾಗ ವ್ಯರ್ಥವಾಗದಂತೆ ಪ್ರತಿಯೊಬ್ಬರು ಶ್ರಮಿಸುವಂತೆ ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಪಂಡಿತ್ ಉಪಾಧ್ಯಾಯ ಅಂದು ಪಕ್ಷ ಸಂಘಟನೆಗೆ ಹಾಕಿಕೊಟ್ಟಿರುವ ಭದ್ರ ಬುನಾದಿಯಿಂದ ಇಂದು ಬಿಜೆಪಿ ದೇಶದ ಬಲಿಷ್ಠ ರಾಜಕೀಯ ಶಕ್ತಿಯಾಗಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವನ್ನು ಮುನ್ನಡೆಸುವಂತಾಗಿದೆ ಎಂದು ನೆನಪಿಸಿದರು.
ಮಹಿಳಾ ಅಧ್ಯಕ್ಷೆ ಯಮುನಾ ಚಂಗಪ್ಪ ಮಾತನಾಡಿ, ಕೊಡಗಿಗೆ ಎದುರಾಗಿರುವ ಪ್ರಾಕೃತಿಕ ವಿಕೋಪ ಸಂದರ್ಭ ಜಿಲ್ಲೆಯ ಸಂಸದರು, ಶಾಸಕರು, ಮೇಲ್ಮನೆ ಸದಸ್ಯರ ಸಹಿತ ಎಲ್ಲರ ಪರಿಶ್ರಮ ಶ್ಲಾಘನೀಯವೆಂದು ನುಡಿದರು. ಇಂದು ದೇಶದ ಗಡಿಯಲ್ಲಿ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸುವಲ್ಲಿ ಸರ್ಜಿಕಲ್ ಕಾರ್ಯಾಚರಣೆ ಮೂಲಕ ಭಾರತ ದಿಟ್ಟತನ ಮೆರೆದು ತಾ. 29 ರಂದು (ಇಂದು) ಒಂದು ವರ್ಷ ಪೂರೈಸಲಿದ್ದು, ಆ ದಿಸೆಯಲ್ಲಿ ಶೌರ್ಯ ದಿನ ಆಚರಿಸುವಂತೆ ಕರೆ ನೀಡಿದರು.
ಕೇಂದ್ರ ಸರಕಾರದ ಸಾಧನೆಗಳೊಂದಿಗೆ, ವಿಶ್ವಮಟ್ಟದಲ್ಲಿ ಜಗತ್ತಿನ ಒಳಿತಿಗಾಗಿ ಶ್ರಮಿಸಿ ಪುರಸ್ಕಾರಕ್ಕೆ ಭಾಜನರಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‍ಡಿಎ ಸರಕಾರ ಮರಳಿ ಅಧಿಕಾರ ಗಳಿಸುವತ್ತ ಮಹಿಳಾ ಕಾರ್ಯಕರ್ತರು ಶ್ರಮಿಸುವಂತೆ ಸಲಹೆ ನೀಡಿದರು.
ಈ ವೇಳೆ ಪ್ರಾಕೃತಿಕ ಸಂತ್ರಸ್ತರಿಗೆ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ ನಗದು ರೂಪದಲ್ಲಿ ನೆರವು ನೀಡಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಪ್ರಾಕೃತಿಕ ವಿಕೋಪ ಸಂದರ್ಭ ಮಡಿದವರಿಗೆ, ಹುತಾತ್ಮ ಸೈನಿಕರಿಗೆ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸವಿತಾ ರಾಕೇಶ್, ಭಾರತೀ ರಮೇಶ್, ಮೀನಾಜ್, ರಾಣಿ, ಕವಿತಾ ಪ್ರಭಾಕರ್, ಯಾಲದಾಳು ಪದ್ಮಾವತಿ, ಬೀನಾ ಬೊಳ್ಳಮ್ಮ ಮೊದಲಾದವರು ಪಾಲ್ಗೊಂಡಿದ್ದರು.