ಸೋಮವಾರಪೇಟೆ, ಸೆ. 27: ಪ್ರಸಕ್ತ ಸಾಲಿನ ಪ್ರವಾಹ, ಅತಿವೃಷ್ಟಿಯಿಂದ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ತಕ್ಷಣ ವಿಶೇಷ ಗ್ರಾಮ ಸಭೆ ಕರೆಯುವಂತೆ ಗ್ರಾ.ಪಂ.ಗೆ ಮನವಿ ಮಾಡಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿ, ಕಿರಗಂದೂರು, ತಾಕೇರಿ ಮತ್ತು ಬಿಳಿಗೇರಿ ವ್ಯಾಪ್ತಿಯ ಗ್ರಾಮಸ್ಥರು ಕಿರಗಂದೂರು ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅತಿವೃಷ್ಟಿಯಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿ ಸೇರಿದಂತೆ ಮನೆಗಳು ಹಾನಿಗೀಡಾಗಿವೆ. ಪರಿಹಾರ ಕಾರ್ಯಗಳೂ ಸಮರ್ಪಕವಾಗಿ ನಡೆದಿಲ್ಲ. ಸರ್ಕಾರಿ ಇಲಾಖಾಧಿಕಾರಿ ಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆ ವಿಶೇಷ ಗ್ರಾಮ ಸಭೆ ಕರೆಯುವಂತೆ ಕಳೆದ 15 ದಿನಗಳ ಹಿಂದೆ ಪಂಚಾಯಿತಿಗೆ ತಿಳಿಸಿದ್ದರೂ ಸಹ ನಿರ್ಲಕ್ಷ್ಯವಹಿಸಲಾಗಿದೆ ಎಂದು ತಾಕೇರಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಆರೋಪಿಸಿದರು.

ಪ್ರವಾಹದಿಂದಾಗಿ ಗದ್ದೆ, ತೋಟ ಗಳು ಸಂಪೂರ್ಣ ಹಾನಿಗೀಡಾಗಿದೆ. ಕಿರಗಂದೂರು ಗ್ರಾಮ ಸಂಪರ್ಕಿಸುವ ದುದ್ದುಗಲ್ಲು ರಸ್ತೆ ಕುಸಿದಿದ್ದು, ತಕ್ಷಣ ದುರಸ್ತಿ ಗೊಳಿಸುವಂತೆ ಲೋಕೋಪ ಯೋಗಿ ಇಲಾಖೆಗೆ ಮನವಿ ಮಾಡಿದ್ದರೂ ಪೂರಕ ಸ್ಪಂದನೆ ದೊರೆತಿಲ್ಲ. ಈ ಕಾಮಗಾರಿಯೂ ವಿಳಂಬವಾಗುತ್ತಿದೆ. ರಸ್ತೆ ದುಸ್ಥಿತಿ ಯಿಂದಾಗಿ ಜನಸಾಮಾನ್ಯರೊಂದಿಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿ ಗಳಿಗೂ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎಲ್ಲಾ ಸಮಸ್ಯೆಗಳನ್ನು ಅಧಿಕಾರಿ ಗಳ ಬಳಿ ಹೇಳಿಕೊಳ್ಳಲು ವಿಶೇಷ ಗ್ರಾಮ ಸಭೆಯನ್ನು ಕರೆಯುವಂತೆ ಗ್ರಾ.ಪಂ. ಆಡಳಿತ ಮಂಡಳಿಗೆ ಮನವಿ ಮಾಡಿದ್ದರೂ ಯಾವದೇ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆ ಅನಿವಾರ್ಯ ವಾಗಿ ಪ್ರತಿಭಟನೆ ಮಾಡಬೇಕಾಗಿದೆ ಎಂದು ಕಿರಗಂದೂರು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ್ ಹೇಳಿದರು.

ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳೂ ಸಹ ಈ ಭಾಗದ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದ ಸಾರ್ವಜನಿ ಕರು, ಮುಂದಿನ 1 ವಾರಗಳ ಒಳಗೆ ವಿಶೇಷ ಗ್ರಾಮ ಸಭೆಯನ್ನು ಕರೆಯಬೇಕು. ತಪ್ಪಿದಲ್ಲಿ ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಹೋರಾಟ ವನ್ನು ತೀವ್ರಗೊಳಿಸಲಾಗುವದು ಎಂದು ಎಚ್ಚರಿಸಿದರು.

ಈ ಸಂಬಂಧಿತ ಮನವಿ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಏಜಣ್ಣ ಅವರಿಗೆ ಸಲ್ಲಿಸಲಾ ಯಿತು. ತಕ್ಷಣ ತಹಶೀಲ್ದಾರ್ ಸೇರಿದಂತೆ ಎಲ್ಲಾ ಇಲಾಖಾಧಿಕಾರಿ ಗಳನ್ನು ಸೇರಿಸಿ ಸಭೆಗೆ ದಿನಾಂಕ ನಿಗದಿ ಗೊಳಿಸುವಂತೆ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಬಿಳಿಗೇರಿ ಗ್ರಾಮಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಕೆ. ಗಾಂಧಿ, ತಾಕೇರಿಯ ಸುಮಂತ್, ಕಿರಗಂದೂರಿನ ಸುಧೀರ್, ಕೃಪಾಲ್, ಚಂದ್ರಾಜು, ಚಿದಾನಂದ್ ಸೇರಿದಂತೆ ಇತರರು ಭಾಗವಹಿಸಿದ್ದರು.