ಸೋಮವಾರಪೇಟೆ, ಸೆ. 27: ಕಳೆದ ಮೇ 31 ರಂದು ಸೋಮವಾರಪೇಟೆಯ ಕಕ್ಕೆಹೊಳೆ ಜಂಕ್ಷನ್ ಸಮೀಪ ನಡೆದ ಅಪಘಾತದಲ್ಲಿ ಮೃತಪಟ್ಟ ಗರಗಂದೂರು ಗ್ರಾಮದ ಆಟೋ ಚಾಲಕ ಗಣೇಶ್ ಅವರ ಕುಟುಂಬಕ್ಕೆ ಸಹೃದಯ ದಾನಿಗಳಿಂದ ಇಲ್ಲಿಯವರೆಗೆ ರೂ. 9 ಲಕ್ಷ ಹಣ ಸಂದಾಯವಾಗಿದೆ. ಗಣೇಶ್ ಅವರ ಮರಣಾನಂತರ ಅವರ ಮನೆಯ ಸಂಕಷ್ಟದ ಸನ್ನಿವೇಶವನ್ನು ಜೂ. 11ರ ‘ಶಕ್ತಿ’ಯಲ್ಲಿ ವರದಿ ಮಾಡಲಾಗಿತ್ತು.

ಹಾಸಿಗೆಯಲ್ಲಿಯೇ ಜೀವನದ ಪ್ರತಿ ಕ್ಷಣ ಕಳೆಯಬೇಕಾದ ದೈನೇನ ಸ್ಥಿತಿಯಲ್ಲಿರುವ ಈರ್ವರು ಪುಟ್ಟ ಬಾಲಕಿಯರು, ಬಿದಿರಿನ ಬೊಂಬುಗಳನ್ನು ಬಳಸಿ ಹೆಂಚಿನಿಂದ ನಿರ್ಮಿಸಿರುವ ಮನೆ, 3ನೇ ತರಗತಿ ಓದುತ್ತಿರುವ ಮತ್ತೋರ್ವ ಮಗಳು, ಮಕ್ಕಳ ಆರೈಕೆಯಲ್ಲೇ ಪ್ರತಿ ಕ್ಷಣ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದ ಗಣೇಶ್ ಅವರ ಪತ್ನಿ ಸವಿತ, ಜೀವಕ್ಕೆ ಆಸರೆಯಾಗಿದ್ದ ಪತಿ ಗಣೇಶ್, ಜೀವನಾಧಾರವಾಗಿದ್ದ ಆಟೋ... ಹೀಗೆ ಗಣೇಶ್ ಅವರ ಕುಟುಂಬದ ಸಂಕಷ್ಟದ ಬಗ್ಗೆ ಎಳೆಎಳೆಯಾಗಿ ವರದಿ ಮೂಲಕ ಬೆಳಕು ಚೆಲ್ಲಲಾಗಿತ್ತು.

‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ತಕ್ಷಣ ಜಿಲ್ಲೆಯ ಮೂಲೆ ಮೂಲೆಯಿಂದ ಸಹೃದಯರು ಗಣೇಶ್ ಕುಟುಂಬದ ಸಂಕಷ್ಟಕ್ಕೆ ಮರುಕ ವ್ಯಕ್ತಪಡಿಸಿದ್ದಷ್ಟೇ ಅಲ್ಲದೇ ಧನಸಹಾಯವನ್ನೂ ನೀಡಲು ಮುಂದಾದರು. ಪರಿಣಾಮ ಇದೀಗ ಕುಟುಂಬಕ್ಕೆ ಸುಮಾರು ರೂ. 9 ಲಕ್ಷ ಹಣ ಹರಿದುಬಂದಿದೆ.

ಈ 9 ಲಕ್ಷ ಹಣದಲ್ಲಿ ಗಣೇಶ್ ಅವರ ಈರ್ವರು ವಿಕಲಚೇತನ ಮಕ್ಕಳಾದ ರಮ್ಯ ಮತ್ತು ರಶ್ಮಿಯ ಹೆಸರಿನಲ್ಲಿ ಐಗೂರಿನ ವಿಜಯಾ ಬ್ಯಾಂಕ್‍ನಲ್ಲಿ ತಲಾ 3 ಲಕ್ಷ, ಮತ್ತೋರ್ವ ಮಗಳು ಭೂಮಿಕಾಳ ಹೆಸರಿನಲ್ಲಿ 2 ಲಕ್ಷ ಹಣವನ್ನು ಠೇವಣಿ ಇಡಲಾಗಿದ್ದು, ಉಳಿದ 1 ಲಕ್ಷ ಹಣವನ್ನು ಪತ್ನಿ ಸವಿತ ಅವರ ಎಸ್.ಬಿ. ಖಾತೆಯಲ್ಲಿ ಇಡಲಾಗಿದೆ.

-ವಿಜಯ್ ಹಾನಗಲ್