ಸೋಮವಾರಪೇಟೆ,ಸೆ.27: ಕಳೆದ 2016ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೂಡಿಗೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್.ಮಂಜುಳಾ ಅವರ ಆಯ್ಕೆಯನ್ನು ಸೋಮವಾರಪೇಟೆ ಹಿರಿಯ ಸಿವಿಲ್ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಪರಿಶಿಷ್ಟ ಪಂಗಡ(ಮಹಿಳೆ) ಮೀಸಲಾಗಿದ್ದ ಕೂಡಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಬಿಜೆಪಿಯಿಂದ ಕೆ.ಆರ್.ಮಂಜುಳಾ ಅವರು ಆಯ್ಕೆಯಾಗಿದ್ದರು. ಆದರೆ ಅವರು ನಾಮಪತ್ರ ಸಲ್ಲಿಕೆ ಸಂದರ್ಭ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ದುರುಪಯೋಗಪಡಿಸಿ ಕೊಂಡಿದ್ದಾರೆ ಎಂದು ಅವರ ಸಮೀಪದ ಸ್ಪರ್ಧಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಜಿ.ಆರ್.ಪುಷ್ಪಲತಾ ಅವರು ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು.
ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಆರ್.ಮಂಜುಳಾ ಅವರು ನಾಮಪತ್ರ ಸಲ್ಲಿಕೆ ಸಂದರ್ಭ ಜಾತಿ ಕಲಂನಲ್ಲಿ ನಾಯಕ ಎಂದು ನಮೂದಿಸಿ ಅದರಂತೆ ಪರಿಶಿಷ್ಟ ಪಂಗಡದ ಮೀಸಲಾತಿ ಪಡೆದುಕೊಂಡು 23.2.2016ರಂದು ಗೆಲುವು ಸಾಧಿಸಿದ್ದರು. ಆದರೆ ಮಂಜುಳಾ ಅವರು ಪರಿವಾರ ಜಾತಿಗೆ ಸೇರಿದ್ದು, ಆ ಜಾತಿಯು ಪರಿಶಿಷ್ಟ ಪಂಗಡಕ್ಕೆ ಸೇರುವದಿಲ್ಲ ಎಂದು ಆಕ್ಷೇಪಣೆ ಸಲ್ಲಿಸಿ ಪುಷ್ಪಲತಾ ಕಾನೂನಾತ್ಮಕ ಹೋರಾಟ ನಡೆಸಿದ್ದರು.
ನಾಮಪತ್ರ ಸಲ್ಲಿಕೆ ಸಂದರ್ಭವೇ ಮಂಜುಳಾ ಸಲ್ಲಿಸಿದ್ದ ಜಾತಿ ದೃಢೀಕರಣಪತ್ರ ನಕಲಿಯಾಗಿದೆ ಎಂದು ಚುನಾವಣಾಧಿಕಾರಿಗಳಿಗೆ ಪುಷ್ಪಲತ ಅವರು ಆಕ್ಷೇಪಣೆ ಸಲ್ಲಿಸಿದ್ದರು.
(ಮೊದಲ ಪುಟದಿಂದ) ಆದರೆ ತಾಲೂಕು ಕಚೇರಿಯಿಂದ ನೀಡಿರುವ ಜಾತಿ ದೃಢೀಕರಣ ಪತ್ರ ಅಧಿಕೃತವಾಗಿದ್ದು, ಅದನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ನಂತರ ಮಡಿಕೇರಿಯ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪುಷ್ಪಲತಾ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಮಂಜುಳಾ ಅವರ ಜಾತಿ ಪ್ರಮಾಣಪತ್ರ ನಕಲಿಯಾಗಿದೆ ಎಂದು ಆದೇಶಿಸಿ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ನೀಡಿದ್ದ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಮಂಜುಳ ರಾಜ್ಯ ಹೈಕೋರ್ಟ್ ಮೊರೆ ಹೋದರು. ಎಲ್ಲವನ್ನು ಪರಿಶೀಲಿಸಿದ ಹೈಕೋರ್ಟ್ ಪ್ರಕರಣವನ್ನು ಪಂಚಾಯತ್ ರಾಜ್ ನಿಯಮದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆಗೆ ಸಂಬಂಧಿಸಿದಂತೆ ವ್ಯಾಜ್ಯಗಳನ್ನು ಪರಿಹರಿಸಲು ಮತ್ತು ಅರ್ಜಿದಾರರು ಯಾವ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೋ ಅದೇ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಿ ಎಂದು ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಆದರೆ ಕೂಡಿಗೆ ಕ್ಷೇತ್ರವು ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಗೆ ಬರುವದರಿಂದ ಸೋಮವಾರಪೇಟೆಯ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಪ್ರಕರಣವನ್ನು ಮತ್ತೆ ವರ್ಗಾಯಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್.ದೊಡ್ಡಮನಿ ಅವರು 25.9.2018ರಂದು ಕರ್ನಾಟಕ ಪಂಚಾಯತ್ ರಾಜ್ ಕಲಂ 171, ಉಪಕಲಂ 15ರ ಪ್ರಕಾರ ಆದೇಶ ನೀಡಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಆರ್.ಮಂಜುಳಾ ಅವರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸಲ್ಲಿಸಿದ್ದ ಜಾತಿ ದೃಢೀಕರಣ ಪತ್ರ ನಕಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಲಾಗಿದೆ. ಅದರ ಜತೆಗೆ ಪುಷ್ಪಲತಾ ಅವರು ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದ ತಮ್ಮನ್ನು ಆ ಸ್ಥಾನಕ್ಕೆ ಆಯ್ಕೆಯಾಗಿರುವದಾಗಿ ಘೋಷಿಸಬೇಕು ಎಂದು ಕೋರಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ ಆದೇಶ ನೀಡಿದೆ. ಪುಷ್ಪಲತಾ ಅವರ ಪರ ಹಿರಿಯ ವಕೀಲ ಎನ್.ಸಿ. ಚನ್ನಬಸವಯ್ಯ ಅವರು ವಾದ ಮಂಡಿಸಿದ್ದರು.