ಮಡಿಕೇರಿ, ಸೆ.27 : ಒಂದು ಚಲನಚಿತ್ರ ಬಿಡುಗಡೆಗೊಂಡು ಶತದಿನಗಳನ್ನು ಪೂರೈಸಿದರೆ, ಅದೊಂದು ರೀತಿಯ ಸಂಭ್ರಮ. ಪ್ರಪಂಚದಲ್ಲಿ ಜನಪ್ರಿಯವಾಗಿರುವ ಕ್ರಿಕೆಟ್ ಆಟದಲ್ಲಿ ಒಬ್ಬ ಆಟಗಾರ ಶತಕ (ನೂರು ರನ್) ಸಿಡಿಸಿದರೆ, ಅದೂ ಕೂಡ ಮತ್ತೊಂದು ರೀತಿಯ ಸಂಭ್ರಮ. ಆದರೆ ನಿರಂತರವಾಗಿ ಶತದಿನಗಳಿಗೂ ಅಧಿಕ ಸಮಯ ನಿರಂತರವಾಗಿ ಮಳೆ ಸುರಿಯುವದು ಅದೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶತ ಇಂಚು (ನೂರು ಇಂಚು..!) ಗಳಿಗೂ ಅಧಿಕವಾಗಿ ಹೊಡೆದರೆ ಹೇಗಿರಬೇಡ. ಇಂತಹ ಸನ್ನಿವೇಶವನ್ನು ಪ್ರಸಕ್ತ ವರ್ಷ ಎದುರಿಸಿರುವದು ಮಲೆನಾಡು ಜಿಲ್ಲೆಯಾದ ಪುಟ್ಟ ಕೊಡಗು ಜಿಲ್ಲೆ. ಕೃಷಿ ಪ್ರಧಾನವಾಗಿರುವ ಈ ಜಿಲ್ಲೆ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಜರ್ಜರಿತಗೊಂಡಿದ್ದು, ಈ ಹಿಂದೆಂದೂ ಕಂಡು ಕೇಳರಿಯದ ಮಾದರಿಯ ದುರಂತಕ್ಕೂ ಒಳಗಾಗಿದೆ.
ಹಲವಾರು ಜೀವ ಹಾನಿಗಳು, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ರಸ್ತೆ - ಸೇತುವೆಗಳ ಕುಸಿತ, ಭಾರೀ ಭೂಕುಸಿತ, ಬೆಟ್ಟಗಳೇ ಜರಿದಿರುವದು ಮಾತ್ರವಲ್ಲದೆ, ಇಂತಹ ಸನ್ನಿವೇಶದಿಂದಾಗಿ ಜಿಲ್ಲೆಯ ಭೌಗೋಳಿಕತೆಯೇ ಬದಲಾಗಿ ಹೋದಂತಾಗಿದೆ. ಕೃಷಿ ಫಸಲುಗಳು ಸೇರಿದಂತೆ ಜಿಲ್ಲೆಯ ಆರ್ಥಿಕತೆಯ ಬೆನ್ನಲುಬಾದ ಕಾಫಿ ಉದ್ದಿಮೆಯ ಪರಿಸ್ಥಿತಿಯೂ ಅಲ್ಲೋಲ - ಕಲ್ಲೋಲವಾಗಿದ್ದು, ಬಾಂಬ್ ಸ್ಫೋಟಿಸಿದಂತಹ ಪರಿಸ್ಥಿತಿಯಿಂದ ಜಿಲ್ಲೆ ಮೇಲೇಳಲು ಹಲವು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಕೇವಲ ಆಶಾಭಾವನೆಯೊಂದೇ ಸದ್ಯದ ಮಟ್ಟಿಗೆ ಜಿಲ್ಲೆಯ ಜನರಿಗೆ ಇರುವ ಮರೀಚಿಕೆಯಾಗಿದೆ.
ಮಳೆ ಎಲ್ಲೆಲ್ಲಿ... ಎಷ್ಟೆಷ್ಟು..?
ಪ್ರಸಕ್ತ ವರ್ಷ ಸುರಿದಿರುವ ಮಳೆಯ ಪ್ರಮಾಣ ಈ ಹಿಂದಿನ ವರ್ಷಗಳಿಗಿಂತ ತೀರಾ ಅಧಿಕವಾಗಿದೆ. ಈ ತನಕ ಸುರಿದಿರುವ ಮಳೆಯ ಪ್ರಮಾಣವನ್ನು ಅಂಕಿ ಅಂಶಗಳ ಪ್ರಕಾರ ಹೋಲಿಸಿದಲ್ಲಿ ದಿಗಿಲುಂಟಾಗುತ್ತದೆ.
ವಾಡಿಕೆ ಮಳೆ
ಜಿಲ್ಲೆಯಲ್ಲಿ ವಾಡಿಕೆಯಂತೆ ಮಡಿಕೇರಿ ತಾಲೂಕಿನಲ್ಲಿ 132.64, ಸೋಮವಾರಪೇಟೆ ತಾಲೂಕಿನಲ್ಲಿ 87.6 ಇಂಚು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 101.60 ಇಂಚು ಹಾಗೂ ಜಿಲ್ಲಾ ಸರಾಸರಿ 107.72 ಇಂಚಿನಷ್ಟಿರುತ್ತಿತ್ತು.
ಈ ಬಾರಿ
ಪ್ರಸಕ್ತ ವರ್ಷ ಜನವರಿಯಿಂದ ಈ ತನಕ ಮಡಿಕೇರಿ ತಾಲೂಕಿನಲ್ಲಿ 220 . 57 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕೇವಲ 116.12 ಇಂಚಿನಷ್ಟು ಮಾತ್ರ ಮಳೆಯಾಗಿದ್ದು, ಈ ಪ್ರಮಾಣ 104.45 ಇಂಚಿನಷ್ಟು ಅಧಿಕವಾಗಿದೆ. ಮಡಿಕೇರಿ ನಗರದಲ್ಲೂ ಈ ವರ್ಷ ಕಳೆದ ವರ್ಷಕ್ಕಿಂತ 100 ಇಂಚಿಗಿಂತ ಅಧಿಕ ಮಳೆ ದಾಖಲಾಗಿದೆ. ಕಳೆದ ವರ್ಷವಾದ 2017ರಲ್ಲಿ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ 113.64 ಇಂಚು ಮಳೆಯಾಗಿದ್ದರೆ, ಈ ಬಾರಿ ಈ ತನಕದ ಅವಧಿಯಲ್ಲೇ 222.43 ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ 108.79 ಇಂಚಿನಷ್ಟು ಅಧಿಕವಿದೆ.
ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯವರೆಗೆ 66.50 ಇಂಚು ಮಳೆಯಾಗಿದ್ದರೆ, ಪ್ರಸಕ್ತ ವರ್ಷ 116.73 ಇಂಚು ಸರಾಸರಿ ಮಳೆಯಾಗಿದ್ದು, ಈ ತಾಲೂಕಿನಲ್ಲಿಯೂ ಮಳೆಯ ಪ್ರಮಾಣ 50.23 ಇಂಚು ಅಧಿಕವಿದೆ. ಸೋಮವಾರ ಪೇಟೆ ತಾಲೂಕಿನಲ್ಲಿ ಕಳೆದÀ ವರ್ಷ ಈ ಅವಧಿಯವರೆಗೆ 64.66 ಇಂಚು ಮಳೆಯಾಗಿತ್ತು. ಈ ಬಾರಿ ಈ ತನಕ 123.27 ಇಂಚು ಆಗಿದ್ದು, ಈ ತಾಲೂಕಿನಲ್ಲಿಯೂ 58.61 ಇಂಚು ಅಧಿಕವಿದೆ. ಇದು ಈ ಎರಡು ತಾಲೂಕುಗಳ ಸರಾಸರಿ ಮಳೆಯಾಗಿದೆ. ಆದರೂ ಎರಡು ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ವರ್ಷಕ್ಕಿಂತಲೂ 100 ಇಂಚಿಗೂ ಅಧಿಕ ಮಳೆ ಬಿದ್ದಿದೆ.
ಜಿಲ್ಲಾ ಸರಾಸರಿ ತೆಗೆದುಕೊಂಡಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 82.43 ಇಂಚು ಮಳೆಯಾಗಿದ್ದರೆ,
(ಮೊದಲ ಪುಟದಿಂದ) ಪ್ರಸಕ್ತ ವರ್ಷ 153.52 ಇಂಚಿನಷ್ಟಾಗಿದ್ದು, ಜಿಲ್ಲಾ ಸರಾಸರಿಯ ಪ್ರಮಾಣವೂ 71.09 ಇಂಚು ಅಧಿಕವಿದೆ.
ಜಿಲ್ಲೆ ಭೌಗೋಳಿಕವಾಗಿ ವಿಭಿನ್ನವಾಗಿದ್ದರೂ ಜಿಲ್ಲೆಯೊಳಗೆ ಆಂತರಿಕವಾಗಿ ಒಂದೇ ರೀತಿಯಲ್ಲಿ ಮಳೆಯ ಪ್ರಮಾಣ ಇರುವದಿಲ್ಲ. ಒಂದೊಂದೆಡೆ ಒಂದೊಂದು ರೀತಿಯಲ್ಲಿ ಮಳೆಯ ತೀವ್ರತೆ ಇರುತ್ತದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಜಿಲ್ಲೆಯ ಕೆಲವೇ ಕೆಲವು ಭಾಗಗಳನ್ನು ಹೊರತುಪಡಿಸಿ ಇನ್ನಿತರ ಬಹುತೇಕ ಕಡೆಗಳಲ್ಲಿ ಮಳೆಯ ಪ್ರಮಾಣ 100 ಇಂಚಿಗಿಂತಲೂ ಅಧಿಕವೇ ಆಗಿದೆ. ಶತದಿನಗಳಿಗೂ ಅಧಿಕ ಸುರಿದ ನಿರಂತರ ಮಳೆ ಹಿಂದಿನ ವರ್ಷಕ್ಕಿಂತ 100 ಇಂಚಿಗೂ ಅಧಿಕವಾಗಿ ಸುರಿದಿರುವ ಹಿನ್ನೆಲೆಯಲ್ಲಿ ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆ ಅಕ್ಷರಶಃ ನಲುಗಿ ಹೋಗಿದೆ. ಇದರಿಂದಾಗಿ ಇಲ್ಲಿನ ಎಲ್ಲಾ ವ್ಯವಸ್ಥೆಗಳು, ಆರ್ಥಿಕತೆ ಕುಸಿದಿದ್ದು, ಕೊಡಗಿನ ಪಾಲಿಗೆ 2018ರ ವರ್ಷ ಕರಾಳವಾಗಿರುವದು ಕಟುಸತ್ಯ. -ಶಶಿ